ರಾಯ್ಪುರ್ :ದಕ್ಷಿಣ ಆಫ್ರಿಕಾ ಲೆಜೆಂಡ್ ವಿರುದ್ಧ ಸತತ ನಾಲ್ಕು ಎಸೆತಗಳಿಗೆ ನಾಲ್ಕು ಸಿಕ್ಸರ್ ಸಿಡಿಸುವ ಮೂಲಕ ಭಾರತ ತಂಡ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ತಾವು ಸಿಕ್ಸರ್ ಕಿಂಗ್ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಜಾಂಡರ್ ಡಿ ಬ್ರೂಯಿನ್ ಎಸೆದ 18ನೇ ಓವರ್ನಲ್ಲಿ ಮೊದಲ ಎಸೆತವನ್ನು ಡಾಟ್ ಮಾಡಿದ ಯುವಿ ನಂತರದ ನಾಲ್ಕು ಎಸೆತಗಳಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿದರು. 6ನೇ ಎಸೆತ ಡಾಟ್ ಮಾಡಿದರು. ಅವರು ಈ ಪಂದ್ಯದಲ್ಲಿ 22 ಎಸೆತಗಳಲ್ಲಿ 2 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್ಗಳ ಸಹಿತ ಅಜೇಯ 52 ರನ್ಗಳಿಸಿದರು.
ಯುವಿ ಜೊತೆಗೆ ಅಬ್ಬರಿಸಿದ ಸಚಿನ್ ತೆಂಡೂಲ್ಕರ್ 37 ಎಸೆತಗಳಲ್ಲಿ 60, ಬದ್ರಿನಾಥ್ 34 ಎಸೆತಗಳಲ್ಲಿ 42, ಯೂಸುಫ್ ಪಠಾಣ್ 10 ಎಸೆತಗಳಲ್ಲಿ 23 ರನ್ಗಳಿಸಿ ಟೂರ್ನಿಯಲ್ಲಿ ಮೊದಲ ಬಾರಿಗೆ 200(204)ರ ಗಡಿ ದಾಟಲು ನೆರವಾದರು.
ಇನ್ನಿಂಗ್ಸ್ ನಂತರ ಮಾತನಾಡಿದ ಅವರು, "ಅದು ಉತ್ತುಂಗದಲ್ಲಿದ್ದ ಸಮಯ 6 ಎಸೆತಗಳಿಗೆ 6 ಸಿಕ್ಸರ್ ಹೊಡೆದಿದ್ದೆ, ಈಗ 4 ಎಸೆತಗಳಿಗೆ 4 ಸಿಕ್ಸರ್, ಇದು ಕೂಡ ಚೆನ್ನಾಗಿದೆ ಎಂದು ಸ್ವೀಕರಿಸುತ್ತೇನೆ. ಕ್ಯಾಚ್ ಡ್ರಾಪ್ ಆಗಿದ್ದು ನನಗೆ ಸಿಕ್ಕ ಅದೃಷ್ಟ. ಇಂಗ್ಲೆಂಡ್ ವಿರುದ್ಧ ಭಾರತ ತಂಡ ಮೊದಲ ಪಂದ್ಯ ಸೋತಿದೆ. ಹಾಗಾಗಿ, ನನಗೆ ಅವಕಾಶ ಸಿಗಬಹುದೇ (ತಮಾಷೆಗಾಗಿ) ಎಂದರು.
ನಾನು ಚೆಂಡನ್ನು ದಂಡಿಸಿದ ರೀತಿಗೆ ಖುಷಿಯಿದೆ. ನಿವೃತ್ತಿ ಹೊಂದಿರುವ ಆಟಗಾರರಿಗೆ ಬೆಂಬಲ ನೀಡಲು ಇಷ್ಟೊಂದು ಅಭಿಮಾನಿಗಳು ಬಂದಿರುವುದು ನಮಗೆ ತುಂಬಾ ಖುಷಿಯಿದೆ ಎಂದು ಸಿಕ್ಸರ್ ಕಿಂಗ್ ಯುವಿ ಹೇಳಿದ್ದಾರೆ.