ಹೈದರಾಬಾದ್: 2020 ಗತಿಸಿ ಇನ್ನೆರೆಡು ದಿನಗಳಲ್ಲಿ ಹೊಸ ಸಂವತ್ಸರದ ಆಗಮನವಾಗಲಿದೆ. ಆದರೆ 2020 ಕ್ರೀಡಾಭಿಮಾನಿಗಳಿಗೆ ಖುಷಿ ನೀಡಿದ್ದಕ್ಕಿಂತ ಹೆಚ್ಚು ನೋವನ್ನೆ ನೀಡಿದೆ. ಒಂದು ಕಡೆ ಕೋವಿಡ್ 19 ವೈರಸ್ನಿಂದ ಕ್ರೀಡಾ ಚಟುವಟಿಕೆ ಸ್ಥಗಿತಗೊಂಡರೆ, ಮತ್ತೊಂದೆಡೆ ಕೆಲವು ಕ್ರೀಡಾ ದಿಗ್ಗಜರು ನಮ್ಮನ್ನಲ್ಲೇ ಅಗಲಿ ಇಹಲೋಕ ತ್ಯಜಿಸಿದ್ದಾರೆ.
ಕೋಬ್ ಬ್ರಿಯಾಂಟ್
2020ರ ಹೊಸ ವರ್ಷಾರಂಭದಲ್ಲೇ ಇಡೀ ಕ್ರೀಡಾಲೋಕಕ್ಕೆ ಆಘಾತ ತಂದಿದ್ದು, ಎನ್ಬಿಎ ಸ್ಟಾರ್ ಕೋಬ್ ಬ್ರಿಯಾಂಟ್ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದರು. 41 ವರ್ಷದ ಆಟಗಾರನ ಜೊತೆ ಆತನ 13 ವರ್ಷದ ಮಗಳು ಕೂಡ ಸಾವನ್ನಪ್ಪಿದ್ದು ಇಡೀ ಕ್ರೀಡಾ ಲೋಕವನ್ನೇ ಕಣ್ಣೀರಿನ ಕಡಲಲ್ಲಿ ಮುಳುಗಿಸಿತ್ತು.
ಸರ್ ಸ್ಟಿರ್ಲಿಂಗ್ ಮೋಸ್
ಏಪ್ರಿಲ್ನಲ್ಲಿ ಫಾರ್ಮುಲಾ ಒನ್ನಲ್ಲಿ ರೇಸ್ ಗೆಲ್ಲದಿದ್ದರೂ, ಮೋಟಾರ್ ಸ್ಪೋರ್ಟ್ಸ್ನ ಶ್ರೇಷ್ಠ ಚಾಲಕರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದ ಸರ್ ಸ್ಟಿರ್ಲಿಂಗ್ ಮೋಸ್ ತಮ್ಮ 90ನೇ ವರ್ಷದಲ್ಲಿ ನಿಧರಾದರು.
ಡಿಯಾಗೋ ಮರಡೋನ
ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ನವೆಂಬರ್ 25ರಂದು ಹೃದಯಾಘಾತದಿಂದ ಮೃತಪಟ್ಟರು. ಇವರು ಮಿದುಳು ಶಸ್ತ್ರಚಿಕಿತ್ಸೆ ಮಾಡಸಿಕೊಂಡ 2 ವಾರದಲ್ಲೇ ಮೃತಪಟ್ಟಿದ್ದರು. ಇವರ ಸಾವು ಫುಟ್ಬಾಲ್ ಲೋಕವನ್ನು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿತು. ಇವರು 1986ರಲ್ಲಿ ಅರ್ಜೆಂಟೀನಾಗೆ ಫುಟ್ಬಾಲ್ ವಿಶ್ವಕಪ್ ಗೆದ್ದುಕೊಡುವಲ್ಲಿ ಪ್ರಮುಖ ವಹಿಸಿದ್ದರು. ಇವರು ತಮ್ಮ ಫುಟ್ಬಾಲ್ ಕೌಶಲ್ಯದಿಂದಾಗಿ ಹ್ಯಾಂಡ್ಸ್ ಆಫ್ ಗಾಡ್ ಎಂದೇ ಖ್ಯಾತಿ ಪಡೆದಿದ್ದರು.
ಪೌಲೋ ರೋಸಿ
ಇಟಲಿಯ ಫುಟ್ಬಾಲ್ ತಾರೆ ಹಾಗೂ 1982ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಪೌಲೋ ರೋಸಿ ತಮ್ಮ 64ನೇ ವಯಸ್ಸಿನಲ್ಲಿ ಡಿಸೆಂಬರ್ 9ರಂದು ದೀರ್ಘಕಾಲದ ಕಾಯಿಲೆಯಿಂದ ಬಳಲಿ ನಿಧನರಾದರು. ಇವರು ಜುವೆಂಟಸ್ ಮತ್ತು ಎಸಿ ಮಲನ್ ಕ್ಲಬ್ ಪರ ಆಡಿದ್ದರು. 1982 ರ ವಿಶ್ವಕಪ್ನಲ್ಲಿ ಬ್ರೆಜಿಲ್ ವಿರುದ್ಧದ ಹ್ಯಾಟ್ರಿಕ್ ಗೋಲು ಬಾರಿಸ ವಿಶ್ವಕಪ್ ಟೈಟಲ್ ಎತ್ತಿ ಹಿಡಿಯಲು ಇವರು ನೆರವಾಗಿದ್ದರು.
ಡೀನ್ ಜೋನ್ಸ್
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರ ಡೀನ್ ಜೋನ್ಸ್ ಸೆಪ್ಟೆಂಬರ್ 24ರಂದು ಮುಂಬೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಆಸ್ಟ್ರೇಲಿಯಾ ಪರ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿದ್ದ ಇವರು 52 ಟೆಸ್ಟ್, 164 ಏಕದಿನ ಪಂದ್ಯಗಳನ್ನಾಡಿದ್ದು, 1984ರಿಂದ 1994ರ ಸಮಯದಲ್ಲಿ ಆಸ್ಟ್ರೇಲಿಯಾ ಪ್ರತಿನಿಧಿಸಿದ್ದರು. ಟೆಸ್ಟ್ ಪಂದ್ಯಗಳಲ್ಲಿ 3,631 ರನ್ಗಳಿಸಿದ್ದರು. 11 ಶತಕ ಮತ್ತು 14 ಅರ್ಧಶತಕಗಳನ್ನು ಬಾರಿಸಿದ್ದರು. ಏಕದಿನ ಕ್ರಿಕೆಟ್ನಲ್ಲಿ 161 ಪಂದ್ಯಗಳಲ್ಲಿ 7 ಶತಕ ಹಾಗೂ 46 ಅರ್ಧಶತಕ ಸಹಿತ 6068 ರನ್ಗಳಿಸಿದ್ದಾರೆ.
ಬಲ್ಬೀರ್ ಸಿಂಗ್
ಭಾರತದ ಹಾಕಿ ದಂತಕತೆ ಬಲ್ಬೀರ್ ಸಿಂಗ್ (ಸೀನಿಯರ್) ಮೇ 25 ರಂದು ವಯೋಸಹಜ ಕಾಯಿಲೆಗಳಿಂದ ನಿಧನರಾದರು. ಇವರು 1948, 1952 ಹಾಗೂ 1956ರ ಒಲಿಂಪಿಕ್ಸ್ನಲ್ಲಿ ಭಾರತ ಹಾಕಿ ತಂಡಕ್ಕೆ ಚಿನ್ನದ ಪದಕ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1952ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ನೆದರ್ಲೆಂಡ್ ವಿರುದ್ಧ ಐದು ಗೋಲು ಬಾರಿಸಿ ಭಾರತವನ್ನು 6-1ರಿಂದ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಚೇತನ್ ಚೌಹಾಣ್
ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಹಾಗೂ ಉತ್ತರ ಪ್ರದೇಶದ ಮಾಜಿ ಸಚಿವರಾಗಿದ್ದ ಚೇತನ್ ಚೌಹಾಣ್ ಆಗಸ್ಟ್ 17ರಂದು ಕೊರೊನಾ ಸೋಂಕಿಗೆ ಬಲಿಯಾದರು. ಇವರು ಭಾರತದ ಪರ 40 ಟೆಸ್ಟ್ ಪಂದ್ಯಗಳನ್ನಾಡಿದ್ದರು. 1969ರಲ್ಲಿ ತಮ್ಮ 22 ವರ್ಷದ ವಯಸ್ಸಿನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಪದಾರ್ಪಣ ಮಾಡಿದ್ದ ಚೌಹಾಣ್ 31ರ ಸರಾಸರಿಯಲ್ಲಿ 2084 ರನ್ ಗಳಿಸಿದ್ದಾರೆ.