ಅಡಿಲೇಡ್: ಪಾಕಿಸ್ತಾನದ ಸ್ಪಿನ್ ಬೌಲರ್ ಆಸ್ಟ್ರೇಲಿಯಾದ ಪ್ರಚಂಡ ಬೌಲಿಂಗ್ ಎದುರೂ ಅದ್ಭುತ ಬ್ಯಾಟಿಂಗ್ ನಡೆಸಿದರಲ್ಲದೆ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ.
ಸರಣಿಯ 2ನೇ ಟೆಸ್ಟ್ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ಅವರ ತ್ರಿಶತಕದ ನೆರವಿನಿಂದ 583 ರನ್ಗಳಿಸಿತು. ಈ ಮೊತ್ತವನ್ನು ಹಿಂಬಾಲಿಸಿದ ಪಾಕಿಸ್ತಾನ ಆಸೀಸ್ ಬಿಗುದಾಳಿಗೆ ಸಿಲುಕಿ ಒಂದು ಹಂತದಲ್ಲಿ 89 ರನ್ನಿಗೆ 6 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು.
ಈ ಹಂತದಲ್ಲಿ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಶಾ ಬಾಬರ್ ಅಜಂ (97) ಜೊತೆಗೂಡಿ 105 ರನ್ ಸೇರಿಸಿದರು. 132 ಎಸೆತಗಳನ್ನೆದುರಿಸಿದ ಬಾಬರ್ 11 ಬೌಂಡರಿ ಸಹಿತ 97 ರನ್ಗಳಿಸಿದ್ದ ವೇಳೆ ಸ್ಟಾರ್ಕ್ ಬೌಲಿಂಗ್ನಲ್ಲಿ ಕೀಪರ್ಗೆ ಕ್ಯಾಚ್ ನೀಡಿ ಔಟಾದರು. ನಂತರ ಬಂದ ಶಾಹೀನ್ ಆಫ್ರಿದಿ ಮರು ಎಸೆತದಲ್ಲೇ ಎಲ್ಬಿ ಬಲೆಗೆ ಬಿದ್ದರು.
ಈ ಹಂತದಲ್ಲಿ ಮೊಹಮ್ಮದ್ ಅಬ್ಬಾಸ್ ಜೊತೆ ಸೇರಿ ಯಾಸಿರ್ 10 ವಿಕೆಟ್ ಜೊತೆಯಾಟದಲ್ಲಿ 77 ರನ್ ಸೇರಿಸಿದರಲ್ಲದೆ ತಮ್ಮ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದರು. 213 ಎಸೆತಗಳನ್ನೆದುರಿಸಿದ ಯಾಸಿರ್ 113 ರನ್ ಗಳಿಸಿ ಕಮ್ಮಿನ್ಸ್ಗೆ ವಿಕೆಟ್ ಒಪ್ಪಿಸಿದರು. ಅಬ್ಬಾಸ್ 29 ರನ್ಗಳಿಸಿದರು.
ಪಾಕಿಸ್ತಾನ 94.4 ಓವರ್ಗಳಲ್ಲಿ 302 ರನ್ಗಳಿಗೆ ಆಲೌಟ್ ಆಯಿತು. 287 ರನ್ಗಳ ಹಿನ್ನಡೆಯೊಂದಿಗೆ ಫಾಲೋಆನ್ಗೆ ಒಳಗಾಗಿರುವ ಪಾಕ್ ಆರಂಭದಲ್ಲೇ ಇಮಾಮ್ ಉಲ್ ಹಕ್ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿದೆ. ಯಾಸಿರ್ ಶಾ ಆಸ್ಟ್ರೇಲಿಯಾ ವಿರುದ್ಧ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದು ಶತಕ ಗಳಿಸಿದ 5ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.