ಪೋಚೆಫ್ಸ್ಟಾರ್ಮ್: ಯಶಸ್ವಿ ಜೈಸ್ವಾಲ್ ಅವರ ಶತಕದಬ್ಬರ ಹಾಗೂ ಟೀಂ ಇಂಡಿಯಾ ಬೌಲರ್ಗಳ ನೆರವಿನಿಂದ ಭಾರತ ತಂಡ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಪಾಕಿಸ್ತಾನ ನೀಡಿದ್ದ 173 ರನ್ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಭಾರತದ ಯುವ ಪಡೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 35.2 ಓವರ್ಗಳಲ್ಲೇ ಗುರಿ ತಲುಪಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಯಶಸ್ವಿ ಜೈಸ್ವಾಲ್ ಭರ್ಜರಿ(105) ಶತಕ ಸಿಡಿಸಿದರೆ ಇವರಿಗೆ ಸಾಥ್ ನೀಡಿದ ದಿವ್ಯಾನ್ಶ್ ಸಕ್ಸೇನಾ(59) ಆಕರ್ಷಕ ಅರ್ಧ ಶತಕ ಸಿಡಿಸಿ ಭಾರತ ತಂಡವನ್ನು ಸತತ ಮೂರನೇ ಬಾರಿಗೆ ಫೈನಲ್ಗೇರುವಂತೆ ಮಾಡಿದರು.
ಯಶಸ್ವಿ ಜೈಸ್ವಾಲ್ 113 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ಗಳ ನೆರವಿನಿಂದ 105 ಹಾಗೂ ಸಕ್ಸೇನಾ 99 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 59 ರನ್ ಗಳಿಸಿದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದ ಪಾಕಿಸ್ತಾನ ತಂಡ 43.1 ಓವರ್ಗಳಲ್ಲಿ 172 ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಬ್ಯಾಟ್ಸ್ಮನ್ ಹೈದರ್ ಅಲಿ (56) ಹಾಗೂ ವಿಕೆಟ್ ಕೀಪರ್ ರೊಹೈಲ್ (62) ರನ್ ಗಳಿಸಿದರು. ಭಾರತದ ಪರ ಸುಶಾಂತ್ ಮಿಶ್ರಾ 3, ಕಾರ್ತಿಕ್ ತ್ಯಾಗಿ 2, ರವಿ ಬಿಶೋನಿ 3 , ಜೈಸ್ವಾಲ್ ಹಾಗೂ ಅಥರ್ವ ಆಂಕೋಲಕರ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಈ ಗೆಲುವಿನೊಂದಿಗೆ ಭಾರತ ತಂಡ ಸತತ 3 ನೇ ಬಾರಿಗೆ ಹಾಗೂ ಒಟ್ಟಾರೆ 7ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಈ ಮೊದಲು 2000, 2006, 2008, 2012, 2016, 2018ರಲ್ಲಿ ಫೈನಲ್ ಪ್ರವೇಶಿಸಿತ್ತು. ಇದರಲ್ಲಿ 2006ರಲ್ಲಿ ಪಾಕಿಸ್ತಾನ ವಿರುದ್ಧ, 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋಲುಕಂಡು ರನ್ನರ್ ಅಪ್ ಆದರೆ, ಉಳಿದ ನಾಲ್ಕು ವಿಶ್ವಕಪ್ಗಳಲ್ಲಿ ಚಾಂಪಿಯನ್ ಆಗಿತ್ತು.