ದಕ್ಷಿಣ ಆಫ್ರಿಕಾ:ಭಾರತ ಮತ್ತು ಪಾಕಿಸ್ತಾನ ನಡುವೆ 19 ವರ್ಷದೊಳಗಿನ ವಿಶ್ವಕಪ್ ಪಂದ್ಯಾವಳಿಯ ಮೊದಲ ಸೆಮಿಫೈನಲ್ ಪಂದ್ಯ ಇವತ್ತು ನಡೆಯಿತು. ಬೌಲರ್ಗಳ ಅಬ್ಬರದಿಂದ ಹಾಗೂ ಯಶಸ್ವಿ ಜೈಸ್ವಾಲ್ ಶತಕದ ನೆರವಿನಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 10 ವಿಕೆಟ್ಗಳ ಅಂತರದಿಂದ ಸೋಲಿಸಿದ ಭಾರತೀಯ ತಂಡ ಫೈನಲ್ ಪ್ರವೇಶಿಸಿದೆ.
ಮಗನ ಯಶಸ್ಸಿಗೆ ತಂದೆಯ ಹರ್ಷ:
ನನ್ನ ಮಗ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಶತಕ ಬಾರಿಸುತ್ತಾನೆ ಎಂದು ಪಂದ್ಯಾರಂಭಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ ತಂದೆ ಭೂಪೇಂದ್ರ ಜೈಸ್ವಾಲ್ ವಿಶ್ವಾಸ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ, ಪಾಕ್ ವಿರುದ್ಧ ಗೆದ್ದು ಭಾರತ ಫೈನಲ್ ಪ್ರವೇಶಲಿದೆ ಎಂದೂ ಅವರು ಹೇಳಿದ್ದರು. ಪಾಕಿಸ್ತಾನದ ಪಂದ್ಯದಲ್ಲಿ ಶತಕ ಬಾರಿಸಬೇಕು. ಅಲ್ಲದೆ, ಪಂದ್ಯ ಗೆದ್ದು ಫೈನಲ್ ಪ್ರವೇಶಿಸಬೇಕು ಎಂದು ಯಶಸ್ವಿಗೆ ಹೇಳಿದ್ದೆ ಎಂದು ಅವರು ಹೇಳಿದರು.
ತಂದೆ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡ ಜೈಸ್ವಾಲ್ 113 ಎಸೆತಗಳನ್ನು ಎದುರಿಸಿ 105 ರನ್ ಬಾರಿಸಿದ್ದಾರೆ. 8 ಸೊಗಸಾದ ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ಗಳು ಅವರ ಶತಕದಾಟದಲ್ಲಿ ಸೇರಿಕೊಂಡಿದ್ದವು. ಈ ಮೂಲಕ ತಂದೆ ಹೇಳಿದ್ದ ಮಾತು ಉಳಿಸಿದ್ದಾರೆ. ಒಂದು ವಿಕೆಟ್ ಕೂಡ ಪಡೆದುಕೊಂಡಿದ್ದಾರೆ.
ಆಡುವಾಗ ಒತ್ತಡ ತೆಗೆದುಕೊಳ್ಳಬೇಡ. ತಾಳ್ಮೆಯಿಂದ ಬೌಲರ್ಗಳನ್ನು ಎದುರಿಸು ಎಂದು ಸಲಹೆ ನೀಡಿದ್ದೇನೆ. ಯಶಸ್ವಿ ಜೈಸ್ವಾಲ್ ಹೆಚ್ಚು ಶ್ರಮ ಹಾಕುತ್ತಾನೆ. ಆತ ಭವಿಷ್ಯದಲ್ಲಿ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಕಾಣಿಸಿಕೊಳ್ಳಬೇಕು. ಆಗ ದೇಶವೇ ಹೆಮ್ಮೆಪಡುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.
ಟೂರ್ನಿಯ ಗ್ರೂಪ್ ಹಂತದಲ್ಲಿ ಯಶಸ್ವಿ ಜೈಸ್ವಾಲ್ ಒಟ್ಟಾರೆ 207 ರನ್ ಗಳಿಸಿದ್ದಾರೆ. ಇವತ್ತಿನ ಪಂದ್ಯದಲ್ಲಿ ಶತಕ ಬಾರಿಸಿದ್ದು, ಈಗ 312 ರನ್‌ಗಳು ಅವರ ಖಾತೆಯಲ್ಲಿವೆ. ಈ ಮೂಲಕ ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.