ಶಾರ್ಜಾ: ಸೋಮವಾರ ಅಂತ್ಯಗೊಂಡ ವುಮೆನ್ಸ್ ಟಿ20 ಚಾಲೆಂಜ್ ಟೂರ್ನಿಯಲ್ಲಿ ಥಾಯ್ಲೆಂಡ್ನ ನಟ್ಟಕನ್ ಚಾಂಟಮ್ ಅವರ ಅದ್ಭುತ ಫೀಲ್ಡಿಂಗ್ ಟ್ವಿಟರ್ನಲ್ಲಿ ಕಿಚ್ಚೆಬ್ಬಿಸಿದ್ದು, ಅವರ ಕ್ರಿಕೆಟ್ ಮೇಲಿರುವ ಬದ್ಧತೆಗೆ ಕ್ರಿಕೆಟಿಗರು ಸೇರಿದಂತೆ ಸಾವಿರಾರು ಅಭಿಮಾನಿಗಳು ಶಹಬ್ಬಾಸ್ಗಿರಿ ನೀಡಿದ್ದಾರೆ.
ಶಾರ್ಜಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸೂಪರ್ ನೋವಾಸ್ ತಂಡದ ಜಮೀಮಾ ರೋಡ್ರಿಗಸ್ ತರ್ಡ್ಮ್ಯಾನ್ನಲ್ಲಿ ಹೊಡೆದ ಚೆಂಡನ್ನು ಬೆನ್ನಟ್ಟಿದ ನಟ್ಟಕನ್ ಚಾಂಟಮ್ ಚೆಂಡು ಇನ್ನೇನು ಬೌಂಡರಿ ಗೆರೆಗೆ ಒಂದು ಅಡಿ ದೂರವಿರುವಾಗ ಡೈವ್ ಮಾಡಿ ಚೆಂಡನ್ನ ತಡೆಯುವಲ್ಲಿ ಯಶಸ್ವಿಯಾದರು.
ಅವರು ಚೆಂಡನ್ನು ತಡೆಯುವ ಪ್ರಯತ್ನದಲ್ಲಿ ಹಾರಿದಾಗ ಅವರ ಮುಖ ನೆಲಕ್ಕೆ ಬಡಿದಿತ್ತು. ಅದನ್ನು ಲೆಕ್ಕಿಸದೆ ಬೌಂಡರಿಯೊಳಗಿಂದ ಎದ್ದು ಬಂದು ಚೆಂಡನ್ನು ಕೀಪರ್ ಕೈಗೆ ಎಸೆದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಆಟಗಾರ್ತಿಗೆ ಕ್ರಿಕೆಟ್ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಆದರೆ, ಉತ್ತಮ ಬ್ಯಾಟಿಂಗ್ ಮಾಡಬಲ್ಲ ಅವರಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬೌಲರ್ಗಳ ನಂತರ ಕಳುಹಿಸಿದ್ದಕ್ಕೆ ಕೆಲವು ಕ್ರಿಕೆಟ್ ತಜ್ಞರು ಅಸಮಾಧಾನ ಹೊರ ಹಾಕಿದ್ದಾರೆ.
ಸೋಮವಾರ ನಡೆದ ವುಮೆನ್ಸ್ ಟಿ20 ಚಾಲೆಂಜ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟ್ರೈಲ್ಬ್ಲೇಜರ್ಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 118 ರನ್ಗಳಿಸಿತ್ತು. ಇದಕ್ಕುತ್ತರವಾಗಿ ಸೂಪರ್ ನೋವಾಸ್ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 102 ರನ್ಗಳಿಸಲಷ್ಟೇ ಶಕ್ತವಾಯಿತು. ಸತತ 2 ಬಾರಿ ಚಾಂಪಿಯನ್ ಆಗಿದ್ದ ಸೂಪರ್ ನೋವಾಸ್ ವಿರುದ್ಧ ಗೆದ್ದ ಸ್ಮೃತಿ ಪಡೆ ಮೊದಲ ಬಾರಿಗೆ ವುಮೆನ್ಸ್ ಟಿ20 ಚಾಲೆಂಜ್ ಟ್ರೋಪಿ ಎತ್ತಿ ಹಿಡಿಯಿತು.