ಕರಾಚಿ:ಭಾರತದಲ್ಲಿ ಮುಂದಿನ ವರ್ಷ ನಡೆಯಲಿರುವ 2021ರ ಟಿ-20 ವಿಶ್ವಕಪ್ ಸರಣಿಯನ್ನು ಭಾರತದಿಂದ ಯುಎಇಗೆ ಸ್ಥಳಾಂತರಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಿಇಒ ವಾಸಿಮ್ ಖಾನ್ ಐಸಿಸಿಗೆ ಮನವಿ ಮಾಡಿದ್ದಾರೆ.
ಭಾರತದಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ಆದ್ದರಿಂದ ಭಾರತದಲ್ಲಿ ಟಿ-20 ವಿಶ್ವಕಪ್ ನಡೆಸುವುದು ಸೂಕ್ತವಲ್ಲ ಎಂದು ವಾಸಿಮ್ ಖಾನ್ ಹೇಳಿದ್ದಾರೆ.
"ಭಾರತದಲ್ಲಿ ಟಿ-20 ವಿಶ್ವಕಪ್ ಆಯೋಜನೆ ಮಾಡಲು ಕೆಲವು ಅನಿಶ್ಚಿತತೆ ಇದೆ. ಏಕೆಂದರೆ ಅಲ್ಲಿ ಕೋವಿಡ್-19 ಹೆಚ್ಚಾಗಿದೆ. ಹಾಗಾಗಿ ಯುಎಇನಲ್ಲಿ ಆಯೋಜಿಸಬೇಕು" ಎಂದು ಖಾನ್ ಕ್ರಿಕೆಟ್ ಬಝ್ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಬಿಸಿಸಿಐ ಕೂಡ ಇಂಗ್ಲೆಂಡ್ ವಿರುದ್ಧದ ತವರು ಸರಣಿಯನ್ನು ಮತ್ತು 2021ರ ಐಪಿಎಲ್ನ ಮೊದಲಾರ್ಧವನ್ನು ಯುಎಇಯಲ್ಲಿ ಆಯೋಜಿಸುವ ಆಲೋಚನೆಯಲ್ಲಿದೆ. ಆದರೆ ಏಪ್ರಿಲ್ ವೇಳೆಗೆ ಇದರ ಬಗ್ಗೆ ಸ್ಪಷ್ಟ ಚಿತ್ರಣ ಬರಬೇಕು ಎಂದು ಅವರು ಹೇಳಿದ್ದಾರೆ.
ಭಾರತಕ್ಕೆ 2021 ಟಿ-20 ವಿಶ್ವಕಪ್ ಆಯೋಜನೆಯ ಹಕ್ಕು ನೀಡಲಾಗಿದೆ. 2022ರ ಆವೃತ್ತಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. 2023ರ 50 ಓವರ್‌ಗಳ ವಿಶ್ವಕಪ್ ಸಹ ಭಾರತದಲ್ಲಿ ನಡೆಯಲಿದೆ.