ಬರ್ಮಿಂಗ್ಹ್ಯಾಮ್:ವಿಶ್ವಕಪ್ನ ಎರಡನೇ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 3 ವಿಕೆಟ್ ಕಳೆದುಕೊಂಡು ಆರಂಭಿಕ ಹಿನ್ನೆಡೆ ಅನುಭವಿಸಿದ್ದ ಆಸೀಸ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಉತ್ತಮವಾಗಿ ಆಡುತ್ತಿದ್ದ ವೇಳೆ ಆರ್ಚರ್ ಎಸೆದ ಬೌನ್ಸರ್ ಮುಖಕ್ಕೆ ಬಡಿದು ಅವರು ಗಾಯಗೊಂಡಿದ್ದಾರೆ.
ಆದ್ರೆ, ತಂಡದ ಹಿತಕ್ಕೋಸ್ಕರ ಮುಖಕ್ಕೆ ಬ್ಯಾಂಡೇಜ್ ಕಟ್ಟಿಕೊಂಡು ಮತ್ತೆ ಧೈರ್ಯವಾಗಿ ಬ್ಯಾಟಿಂಗ್ ಮುಂದುವರಿಸುವ ಮೂಲಕ ಅವರು ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದಾರೆ.
ಬಾಲ್ ಬಡಿದರೂ ವಿಕೆಟ್ ಕಾಪಾಡಿಕೊಂಡ ಕ್ಯಾರಿ:
4ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಕ್ರೀಸಿಗೆ ಬಂದ ಕ್ಯಾರಿ ಇನ್ನಿಂಗ್ಸ್ನ 8ನೇ ಓವರ್ನಲ್ಲಿ ಜೋಫ್ರಾ ಆರ್ಚರ್ ಎಸೆದ ಬೌನ್ಸರ್ ಹೆಲ್ಮೆಟ್ಗೆ ಬಡಿದು ಸ್ಟಂಪ್ಗೆ ಬೀಳುತ್ತಿತ್ತು. ಆ ಸಮಯದಲ್ಲಿ ಗಾಯವನ್ನು ಲೆಕ್ಕಿಸದ ಅವರು ಹೆಲ್ಮೆಟ್ ಹಿಡಿದುಕೊಳ್ಳುವ ಮೂಲಕ ಚೆಂಡು ಸ್ಟಂಪ್ಗೆ ಬೀಳದಂತೆ ತಡೆದರು. 8ನೇ ಓವರ್ನಲ್ಲಿ ಗಾಯಗೊಂಡರೂ ಬ್ಯಾಂಡೇಜ್ ಸುತ್ತಿಕೊಂಡು 27ನೇ ಓವರ್ತನಕ ಬ್ಯಾಟಿಂಗ್ ಮುಂದುವರಿಸಿ 46 ರನ್ಗಳಿಸುವ ಮೂಲಕ ತಮ್ಮ ಕ್ರೀಡಾಪ್ರೇಮವನ್ನು ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.
ಅಂದು ಬ್ರೆಟ್ಲೀ ಇಂದು ಅಲೆಕ್ಸ್:
2011ರಲ್ಲಿ ಭಾರತದ ವಿರುದ್ಧ ಕ್ವಾರ್ಟರ್ ಫೈನಲ್ನಲ್ಲಿ ಯುವರಾಜ್ ಬಾರಿಸಿದ ಚೆಂಡನ್ನು ತಡೆಯಲು ಹೋದ ವೇಗಿ ಬ್ರೆಟ್ ಲೀ ಡೈವ್ ಮಾಡಿದರು. ಆ ಸಂದರ್ಭದಲ್ಲಿ ಬಾಲ್ ಕಣ್ಣಿನ ಮೇಲ್ಭಾಗಕ್ಕೆ ಬಡಿದಿತ್ತು. ಆ ಸಂದರ್ಭದಲ್ಲಿ ಲೀ ಕೂಡ ಬ್ಯಾಂಡೇಜ್ ಕಟ್ಟಿಕೊಂಡೇ ಬೌಲಿಂಗ್ ಮಾಡಿದ್ದರು. ಇಂದು ಕ್ಯಾರಿ ಕೂಡ ಬ್ರೆಟ್ ಲೀ ಯವರನ್ನೇ ಫಾಲೋ ಮಾಡಿದ್ದಾರೆ.