ಉಲಾನ್-ಉಡೆ (ರಷ್ಯಾ): 2019ರ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ತಲುಪಿದ್ದ ಏಕೈಕ ಭಾರತೀಯ ಬಾಕ್ಸರ್ ಮಂಜುರಾಣಿ ಫೈನಲ್ನಲ್ಲಿ ಸೋಲು ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.
ರಷ್ಯಾದಲ್ಲಿ ನಡೆಯುತ್ತಿರುವ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಇದೇ ಮೊದಲ ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸಿದ್ದ ಮಂಜು ರಾಣಿ 18 ವರ್ಷಗಳ ಬಳಿಕ ಪದಾರ್ಪಣೆ ಟೂರ್ನಿಯಲ್ಲೇ ಫೈನಲ್ ತಲುಪಿದ ಬಾಕ್ಸರ್ ಎನಿಸಿಕೊಂಡಿದ್ದರು. ಇವರು 48 ಕೆಜಿ ವಿಭಾಗದಲ್ಲಿ ಫೈನಲ್ ತಲುಪಿ ಭಾರತಕ್ಕೆ ಚಿನ್ನದ ಪದಕ ಆಸೆ ಮೂಡಿಸಿದ್ದರು.
ಆದರೆ, ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ 2ನೇ ಶ್ರೇಯಾಂಕದ ರಷ್ಯಾದ ಎಕಟೆರಿನಾ ಪಾಲ್ಚೇವಾ ವಿರುದ್ಧ 4-1ರ ಅಂತರದಲ್ಲಿ ಸೋಲು ಕಂಡರು. ಆದರೂ ಮಹಿಳೆಯರ ವಿಭಾಗದಲ್ಲಿ ಬೆಳ್ಳಿಗೆದ್ದ ಏಕೈಕ ಬಾಕ್ಸರ್ ಎಂಬ ಕೀರ್ತಿಗೆ ಪಾತ್ರರಾದರು.
ಇನ್ನು, ಶನಿವಾರ ನಡೆದಿದ್ದ ಸೆಮಿಫೈನಲ್ ಪಂದ್ಯಗಳಲ್ಲಿ 6 ಬಾರಿ ವಿಶ್ವಚಾಂಪಿಯನ್ ಆಗಿದ್ದ ಮೇರಿ ಕೋಮ್(51ಕೆಜಿ) ಸೇರಿದಂತೆ ಜಮುನಾ ಬೋರೊ(54), ಲೋವ್ಲಿನಾ(69) ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದರು.ಆದರೆ, ಮಂಜುರಾಣಿ ಸೆಮಿಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್ನ ಚುತಮಾತ್ ರಾಕ್ಸತ್ ವಿರುದ್ಧ 4-1 ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದರು.