ಸಿಡ್ನಿ(ಆಸ್ಟ್ರೇಲಿಯಾ): ಕ್ರಿಕೆಟ್ ಜಗತ್ತಿನ ಆರಂಭದಲ್ಲಿ ಹಲವು ಏಳು-ಬೀಳುಗಳನ್ನು ಕಂಡುಂಡಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ನ ಬಲಿಷ್ಠ ಕ್ರಿಕೆಟ್ ರಾಷ್ಟ್ರಗಳಲ್ಲೊಂದು. ಆದರೆ ಈ ತಂಡಕ್ಕೆ ವಿಶ್ವಕಪ್ ಎನ್ನುವುದು ಮರೀಚಿಕೆ ಆಗುತ್ತಲೇ ಇದೆ. ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ದ.ಆಫ್ರಿಕಾಗೆ ಸಿಕ್ಕಿರುವುದು ಒಂದೇ ವಿಶ್ವಕಪ್, ಅದು 2014ರ ಅಂಡರ್ 19 ವಿಶ್ವಕಪ್.
ಕ್ರಿಕೆಟ್ನ ಬಲಿಷ್ಠ ರಾಷ್ಟ್ರಗಳಿಗೆ ಸಾಕಷ್ಟು ಬಾರಿ ಸೋಲುಣಿಸಿರುವ ಮತ್ತು ಸೋಲಿಸುವ ತಾಕತ್ತು ಹೊಂದಿರುವ ದ.ಆಫ್ರಿಕಾ ತಂಡಕ್ಕೆ ವಿಶ್ವಕಪ್ನಲ್ಲಿ ಕಳಪೆ ಪ್ರದರ್ಶನದಿಂದ ಸೋಲು ಕಂಡಿಲ್ಲ. ಆದ್ರೆ, ಅದೆಷ್ಟೋ ಬಾರಿ ತಂಡ ಅದೃಷ್ಟದ ಕೊರತೆಯಿಂದ ಸೋಲು ಕಂಡಿರುವುದೇ ಹೆಚ್ಚು. ಅದು, 2019ರ ವಿಶ್ವಕಪ್ ಒಂದನ್ನು ಬಿಟ್ಟು.
2020ರ ಮಹಿಳಾ ವಿಶ್ವಕಪ್ನ ಆರಂಭದಲ್ಲೇ ಬಲಿಷ್ಠ ಇಂಗ್ಲೆಂಡ್ಗೆ ಸೋಲಿನ ರುಚಿ ತೋರಿಸಿದ್ದ ದಕ್ಷಿಣ ಆಫ್ರಿಕಾ ನಂತರದ ಮೂರು ಪಂದ್ಯಗಳಲ್ಲಿ ಏಕಪಕ್ಷೀಯ ಗೆಲುವು ಸಾಧಿಸಿ ಸೆಮಿಫೈನಲ್ಗೆ ಎಂಟ್ರಿ ಕೊಟ್ಟಿತ್ತು. ಆದರೆ ಬುಧವಾರ ಆಸ್ಟ್ರೇಲಿಯಾ ತಂಡದ ವಿರುದ್ಧ 5 ರನ್ಗಳ ರೋಚಕ ಸೋಲುಕಂಡು ನಿರಾಶೆ ಅನುಭವಿಸಿದ ತಂಡದ ಸದಸ್ಯರು ಮೈದಾನದಲ್ಲೇ ಗಳಗಳನೆ ಅತ್ತರು.
ಅದೇ ಮಳೆ, ಅದೇ ಡಕ್ವರ್ಥ್ ಲೂಯಿಸ್ ನಿಯಮ:
ದಕ್ಷಿಣ ಆಫ್ರಿಕಾವನ್ನು ಈ ಪಂದ್ಯದಲ್ಲಿ ಸೋಲಿಸಿದ್ದು ಆಸ್ಟ್ರೇಲಿಯಾ ತಂಡ ಎನ್ನುವುದಕ್ಕಿಂತ ಮೂರು ದಶಕಗಳಿಂದ ದಕ್ಷಿಣ ಆಫ್ರಿಕಾವನ್ನು ಕಾಡುತ್ತಿರುವ ಮಳೆ ಹಾಗೂ ಡಕ್ವರ್ಥ್ ಲೂಯಿಸ್ ನಿಯಮವೆಂದೇ ಹೇಳಬೇಕು. ಟಾಸ್ ಸೋತು ಆಸ್ಟ್ರೇಲಿಯಾವನ್ನು ಬ್ಯಾಟಿಂಗ್ ಗೆ ಇಳಿಸಿದ್ದ ಹರಿಣಗಳ ಪಡೆ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಕೇವಲ 134 ರನ್ಗಳಿಗೆ ವಿರೋಧಿ ತಂಡವನ್ನು ಕಟ್ಟಿಹಾಕಿತ್ತು. ಆದರೆ ಈ ವೇಳೆ ಬಂದ ಮಳೆರಾಯ ಉಪಟಳದಿಂದಾಗಿ ಪಂದ್ಯದ ಫಲಿತಾಂಶಕ್ಕೆ ಡಿಎಲ್ ನಿಯಮದ ಮೊರೆಹೋಗಲೇ ಬೇಕಾಯಿತು.
ಒಂದು ವೇಳೆ ಮಳೆಗೆ ಪಂದ್ಯ ರದ್ದಾಗಿದ್ದರೆ, ದಕ್ಷಿಣ ಆಫ್ರಿಕಾ ತಂಡ ನೇರ ಫೈನಲ್ ಪ್ರವೇಶ ಪಡೆಯುತ್ತಿತ್ತು. ದುರಾದೃಷ್ಟ ನೋಡಿ. ಮಳೆ ಕೇವಲ ಅರ್ಧಗಂಟೆಗೆ ನಿಂತು ಹೋಯಿತು! ಪಂದ್ಯವನ್ನು 13 ಓವರ್ಗಳಿಗೆ ಸೀಮಿತಗೊಳಿಸಿ 98 ರನ್ಗಳ ಟಾರ್ಗೆಟ್ ನೀಡಲಾಯಿತು. ಈ ಮೊತ್ತ ಬೆನ್ನತ್ತಿದ ನೀಕರ್ಕ್ ಪಡೆ 92 ರನ್ಗಳಿಸಲಷ್ಟೇ ಶಕ್ತವಾಗಿ 5 ರನ್ಗಳ ಸೋಲು ಕಂಡಿತು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಮಳೆ ಮುಳುವಾಗಿ, ಇಲ್ಲಿಯವರೆಗೆ ಪುರುಷರನ್ನು ಕಾಡಿದ್ದ ಚೋಕರ್ಸ್ ಪಟ್ಟ ಮಹಿಳೆಯರಿಗೂ ಸಿಕ್ಕಂತಾಯಿತು.
ಹರಿಣಗಳಿಗೆ ಡಕ್ವರ್ಥ್ ಲೂಯಿಸ್ ನಿಯಮ ವಿಲನ್:
ನಿಷೇಧದ ಬಳಿಕ ಕ್ರಿಕೆಟ್ಗೆ ದಕ್ಷಿಣ ಆಫ್ರಿಕಾ 1992ರ ವಿಶ್ವಕಪ್ನಲ್ಲಿ ಮತ್ತೆ ಮೈದಾನದಲ್ಲಿ ಕಾಣಿಸಿಕೊಂಡಿತ್ತು. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಆಫ್ರಿಕಾ ತಂಡ ಸೆಮೀಸ್ ಪ್ರವೇಶಿಸಿತ್ತು. ಸೆಮಿಯಲ್ಲಿ ಇಂಗ್ಲೆಂಡ್ ತಂಡ ನೀಡಿದ 252 ರನ್ಗಳ ಗುರಿಯನ್ನು ಬೆನ್ನತ್ತುತ್ತಿದ್ದ ವೇಳೆ ಮಳೆರಾಯ ಎಂಟ್ರಿ ಕೊಟ್ಟಿದ್ದ. ಆಮೇಲೆ ನಡೆದಿದ್ದು ವಿಶ್ವಕಪ್ ಇತಿಹಾಸ ಅತ್ಯಂತ ಕೆಟ್ಟ ಕ್ಲೈಮ್ಯಾಕ್ಸ್!
ಆ ಕಾಲದಲ್ಲಿ ಮಳೆ ಬಂದಾಗ ಪಂದ್ಯವನ್ನು ನಿಲ್ಲಿಸುವ ಅವಕಾಶವಿರಲಿಲ್ಲ. ಟೆಲಿವಿಷನ್ ನಿಯಮದಂತೆ ಪಂದ್ಯ ನಿಲ್ಲಿಸಿ ಮಳೆ ನಿಲ್ಲುವವರೆಗೆ ಕಾಯುವಂತಿರಲಿಲ್ಲ. ಹೀಗಾಗಿ ಅಂಪೈರ್ ಓವರ್ ಕಡಿತ ಮಾಡಲು ನಿರ್ಧರಿಸುತ್ತಿದ್ದರು. 13 ಎಸೆತಕ್ಕೆ 22 ರನ್ ಬೇಕಿದ್ದ ಪಂದ್ಯ ಡಕ್ವರ್ತ್ ಲೂಯಿಸ್ ನಿಯಮದಲ್ಲಿ ಕಡಿತಗೊಂಡಾಗ ಆಗಿದ್ದು ಒಂದು ಎಸೆತಕ್ಕೆ 22 ರನ್! ಪಂದ್ಯ ಕೊನೆಗೊಂಡಾಗ ಕೇಳಿಬಂದಿದ್ದು ಚೋಕರ್ಸ್ ಎನ್ನುವ ಕೂಗು. ಈ ಕೂಗು ನಂತರದ ಬಹುತೇಕ ವಿಶ್ವಕಪ್ ಟೂರ್ನಿಯಲ್ಲಿ ಆಗಾಗ ಪುನರಾವರ್ತನೆಯಾಗುತ್ತಲೇ ಬರುತ್ತಿದೆ.
ಈ ಪಂದ್ಯದ ಬಳಿಕ ಡಕ್ವರ್ತ್ ಲೂಯಿಸ್ ನಿಯಮದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯಿತು. ನಿಯಮವನ್ನು ಸರಳಗೊಳಿಸುವಂತೆ ಸಾಕಷ್ಟು ಒತ್ತಾಯ ಕೇಳಿ ಬಂದಿತ್ತು. ಆದರೂ ಈ ನಿಯಮ ಇಂದಿಗೂ ಅದೆಷ್ಟೋ ಕ್ರಿಕೆಟಿಗರಿಗೆ ಹಾಗೂ ಕ್ರಿಕೆಟ್ ಫ್ಯಾನ್ಸ್ಗೆ ಅರ್ಥವಾಗದೆ ಕಗ್ಗಂಟಾಗಿಯೇ ಉಳಿದಿದೆ.