ಮೆಲ್ಬೋರ್ನ್(ಆಸ್ಟ್ರೇಲಿಯಾ): ರಾಧಾ ಯಾದವ್ ಬಿಗಿ ಬೌಲಿಂಗ್ ದಾಳಿ ಮತ್ತು ಶೆಫಾಲಿ ವರ್ಮಾ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ವನಿತೆಯರು ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ್ದಾರೆ.
ಶ್ರೀಲಂಕಾ ನೀಡಿದ್ದ 114 ರನ್ಗಳ ಗುರಿ ಬೆನ್ನತ್ತಿದ್ದ ಭಾರತೀಯ ವನಿತೆಯರ ತಂಡಕ್ಕೆ ಶೆಫಾಲಿ ಮತ್ತು ಸ್ಮೃತಿ ಮಂಧಾನ ಆಸರೆಯಾದರು. ಮೊದಲ ವಿಕೆಟ್ಗೆ ಈ ಜೋಡಿ 34 ರನ್ ಪೇರಿಸಿತು. ಮಂಧಾನ ಔಟ್ ಆದ ಬಳಿಕ ಮೈದಾನಕ್ಕಿಳಿದ ನಾಯಕಿ ಹರ್ಮನ್ ಪ್ರೀತ್ ಕೌರ್, ಶೆಫಾಲಿ ಜೊತೆ ಸೇರಿ 47 ರನ್ ಪೇರಿಸಿದ್ರು.
ಎಂದಿನಂತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಶೆಫಾಲಿ 34 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 47 ರನ್ ಗಳಿಸಿದ್ರು. ಅರ್ಧಶತಕ ಸಿಡಿಸುವ ಅವಕಾಶ ಇದ್ದರೂ ರನ್ಔಟ್ ಆಗಿ ನಿರಾಸೆ ಅನುಭವಿಸಿದ್ರು. ಜೆಮ್ಮಿ ರೋಡ್ರಿಗಸ್ ಮತ್ತು ದೀಪ್ತಿ ಶರ್ಮಾ ತಲಾ 15 ರನ್ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು. ಅಂತಿಮವಾಗಿ ಟೀಂ ಇಂಡಿಯಾ ವನಿತೆಯರು 14.4 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 116 ರನ್ ಗಳಿಸಿದ್ರು.