ನವದೆಹಲಿ: ಭಾರತ ತಂಡದ ಪ್ರಮುಖ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ 6 ವೈಟ್ ಬಾಲ್ ಪಂದ್ಯಗಳಲ್ಲಿ ಒಟ್ಟಿಗೆ ಆಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಡಿಸೆಂಬರ್ 17ರಂದು ಟೆಸ್ಟ್ ಸರಣಿ ಆರಂಭವಾಗುವುದರಿಂದ ಟೀಮ್ ಮ್ಯಾನೇಜ್ಮೆಂಟ್ ಅವರಿಬ್ಬರಿಗೆ ಕೆಲಸದೊತ್ತಡ ಕಡಿಮೆ ಮಾಡಲು ಚಿಂತಿಸುತ್ತಿದೆ. ಜೊತೆಗೆ ಟೆಸ್ಟ್ ಸರಣಿಗಾಗಿ ಅವರಿಬ್ಬರಿಗೆ ಅಭ್ಯಾಸ ಪಂದ್ಯದಲ್ಲಿ ಆಡುವ ಸಲುವಾಗಿ ವೈಟ್ ಬಾಲ್ ಟೂರ್ನಿಯಲ್ಲಿ ರೊಟೇಶನ್ ಮಾಡಬಹುದು ಎನ್ನಲಾಗುತ್ತಿದೆ.
ಭಾರತ ತಂಡ ಆಸ್ಟ್ರೇಲಿಯಾದಲ್ಲಿ 2 ತಿಂಗಳ ಕಾಲ ಇರಲಿದ್ದು, ಈ ವೇಳೆ 3 ಏಕದಿನ, 3 ಟಿ-20 ಹಾಗೂ 4 ಟೆಸ್ಟ್ ಪಂದ್ಯಗಳನ್ನಾಡಲಿದೆ. ನವೆಂಬರ್ 27ರಿಂದ ಡಿಸೆಂಬರ್ 8ರವರೆಗೆ ವೈಟ್ ಬಾಲ್ ಸರಣಿ ನಡೆಯಲಿದೆ.
ಇಶಾಂತ್ ಶರ್ಮಾ ಟೆಸ್ಟ್ ಸರಣಿಗೆ ಲಭ್ಯವಿರದಿದ್ದರೆ ಬುಮ್ರಾ ಮತ್ತು ಶಮಿಯ ಮೇಲಿನ ಹೊರೆಯನ್ನು ಕಡಿಮೆ ಮಾಡುವುದು ಹೆಡ್ ಕೋಚ್ ರವಿ ಶಾಸ್ತ್ರಿ ಮತ್ತು ಬೌಲಿಂಗ್ ತರಬೇತುದಾರ ಭರತ್ ಅರುಣ್ ಅವರ ಮುಖ್ಯ ಕೆಲಸವಾಗಲಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.
ಮೊದಲ ಟೆಸ್ಟ್ ಅಭ್ಯಾಸ ಪಂದ್ಯ ಡಿಸೆಂಬರ್ 6ರಿಂದ 8ರವರೆಗೆ ಡ್ರಮೋಯ್ನ್ ಓವೆಲ್ನಲ್ಲಿ ನಡೆಯಲಿದೆ. ಈ 3 ದಿನಗಳ ಅಭ್ಯಾಸ ಪಂದ್ಯದ ವೇಳೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 2 ಟಿ-20 ಪಂದ್ಯವನ್ನಾಡಲಿವೆ. ಹಾಗಾಗಿ ಕೇವಲ 12 ದಿನಗಳ ಅಂತರದಲ್ಲಿ 6 ಪಂದ್ಯಗಳಿರುವುದರಿಂದ ಆಡಳಿತ ಮಂಡಳಿ (ರವಿಶಾಸ್ತ್ರಿ, ವಿರಾಟ್ ಕೊಹ್ಲಿ, ಭರತ್ ಅರುಣ್) ಬುಮ್ರಾ ಮತ್ತು ಶಮಿ ವಿಚಾರದಲ್ಲಿ ಸಮಸ್ಯೆ ತಂದುಕೊಳ್ಳಲು ಇಷ್ಟ ಪಡುವುದಿಲ್ಲ ಎನ್ನಲಾಗುತ್ತಿದೆ.
"ಅವರಿಬ್ಬರು(ಶಮಿ ಮತ್ತು ಬುಮ್ರಾ) ಟಿ-20 ಸರಣಿಯಲ್ಲಿ ಆಡಿದರೆ ಒಂದು ಅಭ್ಯಾಸ ಪಂದ್ಯವನ್ನು ತಪ್ಪಿಸಿಕೊಳ್ಳುತ್ತಾರೆ. ಹಾಗಾಗಿ ತಂಡದ ಆಡಳಿತ ಮಂಡಳಿ ಅವರಿಬ್ಬರನ್ನು ಒಟ್ಟಿಗೆ ಆಡಿಸುವ ಸಾಧ್ಯತೆ ಕಡಿಮೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಕಾರಣಗಳಿಂದ ಶಮಿ ಮತ್ತು ಬುಮ್ರಾರನ್ನು ವೈಟ್ ಬಾಲ್ ಪಂದ್ಯಗಳ ವೇಳೆ ವಿಶ್ರಾಂತಿ ನೀಡಿ ಮತ್ತೊಬ್ಬರಿಗೆ ಆಡುವ ಅವಕಾಶ ನೀಡಲಾಗುತ್ತದೆ ಎನ್ನಲಾಗುತ್ತಿದೆ. ಒಂದು ವೇಳೆ ಏಕದಿನ ಸರಣಿಯಲ್ಲಿ ಇಬ್ಬರೂ ಆಡಿದರೆ ಟಿ-20 ಸರಣಿಯಲ್ಲಿ ಮಾತ್ರ ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ.