ಚೆನ್ನೈ: ಗಾಯದ ಕಾರಣ ಕಳೆದ ವರ್ಷದ ಐಪಿಎಲ್ ತಪ್ಪಿಸಿಕೊಂಡಿದ್ದ ವೇಗಿ ಭುವನೇಶ್ವರ್ ಕುಮಾರ್ ಸನ್ ರೈಸರ್ಸ್ ತಂಡವನ್ನು ಸೇರಿಕೊಂಡಿದ್ದು, ಇಂದು ನಡೆಯುವ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಶುಭಾರಂಭ ಮಾಡಲು ಸಜ್ಜಾಗಿದೆ.
ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಎರಡೂ ತಂಡಗಳು 14ನೇ ಆವೃತ್ತಿಯಲ್ಲಿ ತಮ್ಮ ಮೊದಲ ಪಂದ್ಯವನ್ನಾಡಲಿವೆ. ಸತತ 5 ವರ್ಷಗಳಿಂದ ಪ್ಲೇ ಆಫ್ ತಲುಪುವಲ್ಲಿ ಯಶಸ್ವಿಯಾಗಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ಕಳೆದ ಬಾರಿಗಿತಂಲೂ ಪ್ರಬಲವಾಗಿದೆ.
ಭುವನೇಶ್ವರ್ ಕುಮಾರ್, ರಶೀದ್ ಖಾನ್, ಟಿ.ನಟರಾಜನ್ ಅಂತಹ ಶ್ರೇಷ್ಠ ಬೌಲರ್ಗಳ ಜೊತೆಗೆ ಡೇವಿಡ್ ವಾರ್ನರ್, ಜಾನಿ ಬೈರ್‌ಸ್ಟೋವ್, ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್ ಹಾಗೂ ಜೇಸನ್ ರಾಯ್ ಅಂತಹ ಟಿ-20 ಸ್ಪೆಷಲಿಸ್ಟ್ಗಳಿದ್ದಾರೆ. ಇವರ ಜೊತೆಗೆ ಯುವ ಆಟಗಾರರಾದ ವಿಜಯ್ ಶಂಕರ್, ಅಬ್ದುಲ್ ಸಮದ್, ಪ್ರಿಯಂ ಗರ್ಗ್, ವಿರಾಟ್ ಸಿಂಗ್ , ಅಭಿಶೇಕ್ ಶರ್ಮಾ ಅಂತಹ ಯುವ ಆಟಗಾರರ ಬಳಗ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಕಾಯುತ್ತಿದೆ.
ಇತ್ತ ಕೆಕೆಆರ್ ಕೂಡ ಸಮತೋಲನ ತಂಡವನ್ನು ಹೊಂದಿದ್ದು, ಹೈದರಾಬಾದ್ ವಿರುದ್ಧದ ತನ್ನ ಪ್ರಾಬಲ್ಯವನ್ನು ಮುಂದುವರೆಸಲು ಎದುರು ನೋಡುತ್ತಿದೆ. ಲೀಗ್ನಲ್ಲಿ 19 ಬಾರಿ ಮುಖಾಮುಖಿಯಲ್ಲಿ ಕೋಲ್ಕತ್ತಾ 12 ಬಾರಿ ವಾರ್ನರ್ ಬಳಗವನ್ನು ಬಗ್ಗುಬಡಿದಿದೆ. ಅಲ್ಲದೆ ಈ ಬಾರಿ ತಂಡಕ್ಕೆ ಶಕಿಬ್ ಅಲ್ ಹಸನ್, ಹರ್ಭಜನ್ ಸಿಂಗ್ ಅಂತಹ ಸ್ಪಿನ್ ದಿಗ್ಗಜರು ತಂಡ ಸೇರಿರುವುದು ಕೂಡ ತಂಡಕ್ಕೆ ಹೆಚ್ಚಿನ ಬಲ ತಂದಿದೆ.
ಶುಬ್ಮನ್ ಗಿಲ್, ದಿನೇಶ್ ಕಾರ್ತಿಕ್ ನಾಯಕ ಇಯಾನ್ ಮಾರ್ಗನ್ ಜೊತೆಗೆ ಸ್ಫೋಟಕ ಬ್ಯಾಟ್ಸ್ಮನ್ ಆ್ಯಂಡ್ರೆ ರಸೆಲ್ ಮತ್ತು ಸುನೀಲ್ ನರೈನ್ ಅಂತಹ ಆಲ್ರೌಂಡರ್ಗಳು ತಂಡಕ್ಕೆ ಬಲ ತರಲಿದ್ದಾರೆ.