ನವದೆಹಲಿ :ಕ್ರಿಕೆಟ್‌ನಲ್ಲಿ ಹೆಸರು ಗಳಿಸಲು ಪ್ರಯತ್ನಿಸುತ್ತಿರುವ ಯಾವುದೇ ಯುವಕನಿಗೆ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ನಿಜವಾದ ರೋಲ್ ಮಾಡೆಲ್ ಎಂದು ಕೇನ್ ವಿಲಿಯಮ್ಸನ್‌ರನ್ನು ಭಾರತದ ಮಾಜಿ ಬ್ಯಾಟ್ಸ್‌ಮನ್ ವಿ ವಿ ಎಸ್ ಲಕ್ಷ್ಮಣ್ ಪ್ರಶಂಸಿದ್ದಾರೆ.
ಕ್ರೈಸ್ಟ್ ಚರ್ಚ್‌ನಲ್ಲಿ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ವಿಲಿಯಮ್ಸನ್ ಅದ್ಭುತ ಶತಕ ಸಿಡಿಸಿದರು. ಪಂದ್ಯದ ಎರಡನೆಯ ದಿನ ವಿಶ್ವದ ನಂಬರ್ ಒನ್ ಶ್ರೇಯಾಂಕಿತರಾಗಿರುವ ಅವರು ಟೆಸ್ಟ್ ಕ್ರಿಕೆಟ್ನ ತಮ್ಮ 24ನೇ ಶತಕವನ್ನು ಪೂರ್ಣಗೊಳಿಸಿದರ ನಂತರ ಕಿವೀಸ್ ನಾಯಕನ ಬಗ್ಗೆ ವಿವಿಎಸ್ ಲಕ್ಷ್ಮಣ್ ಅವರು ಟ್ವಿಟರ್ನಲ್ಲಿ ಗುಣಗಾನ ಮಾಡಿದ್ದಾರೆ.
"ಕೇನ್ ವಿಲಿಯಮ್ಸನ್ ಅವರ ಸ್ಥಿರತೆ ನೋಡಿ ಆಶ್ಚರ್ಯ ಪಡಬೇಕಾಗಿಲ್ಲ. ಯಾವುದೇ ಮಾದರಿಯ ಪಂದ್ಯಕ್ಕಾದರೂ ನಂಬಲಾಗದ ಕೆಲಸದ ನೀತಿ ಮತ್ತು ಸಿದ್ಧತೆಯ ಕಡೆಗೆ ಗಮನ ನೀಡುವುದು ಅವರ ಯಶಸ್ಸಿನ ಹಿಂದಿನ ಕಾರಣ. ಯಾವುದೇ ಯುವ ಕ್ರಿಕೆಟಿಗನಾದ್ರೂ ಅನುಕರಿಸಲು ವಿಲಿಯಮ್ಸನ್ ನಿಜವಾದ ಆದರ್ಶಪ್ರಾಯರಾಗಿದ್ದಾರೆ" ಎಂದು ಲಕ್ಷ್ಮಣ್ ಟ್ವೀಟಿಸಿದ್ದಾರೆ.