ಸಿಡ್ನಿ:ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆಯಾಗಿದ್ದ 21 ವರ್ಷದ ವಿಲ್ ಪುಕೊವ್ಸ್ಕಿ ಮಾನಸಿಕ ಒತ್ತಡದಿಂದ ಬಳಲುತ್ತಿರುವುದಾಗಿ ಕಾರಣ ನೀಡಿ ಸರಣಿಯಿಂದ ಹೊರ ಬಂದಿದ್ದಾರೆ.
21 ವರ್ಷದ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೆ 14 ಸದಸ್ಯರ ತಂಡದಲ್ಲಿ ಅವಕಾಶ ಪಡೆದಿದ್ದರು. ಜೊತೆಗೆ 3 ದಿನಗಳ ಅಭ್ಯಾಸ ಪಂದ್ಯದಲ್ಲೂ ಪುಕೊವ್ಸ್ಕಿ ಆಡಿದ್ದರು.
ವಿಲ್ ಮೊದಲೇ 2 ಬಾರಿ ಮಾನಸಿಕ ಆರೋಗ್ಯ ಸರಿಯಿಲ್ಲದೆ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಪಾಕಿಸ್ತಾನದ ವಿರುದ್ಧ ಅಭ್ಯಾಸ ಪಂದ್ಯದಲ್ಲಿ 122 ರನ್ಗಳಿಗೆ ಆಸ್ಟ್ರೇಲಿಯಾ ಎ ತಂಡ ಆಲೌಟ್ ಆಗಿದ್ದ ಸಂದರ್ಭದಲ್ಲಿ ತಮ್ಮಿಂದ ಆಟದ ಕಡೆಗೆ ಗಮನ ನೀಡಲಾಗುತ್ತಿಲ್ಲ. ತಮ್ಮನ್ನು ತಂಡದಿಂದ ಕೈ ಬಿಡುವಂತೆ ತಂಡದ ಆಡಳಿತ ಮಂಡಳಿಯನ್ನು ಕೇಳಿಕೊಂಡಿದ್ದಾರೆ.
ವಿಲ್ ಫೆಬ್ರುವರಿಯಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಆಯ್ಕೆಯಾಗಿದ್ದರು. ಆ ಸಂದರ್ಭದಲ್ಲೂ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರಿಂದ ಪೊಕೊವ್ಸ್ಕಿಗೆ ವಿಶ್ರಾಂತಿ ನೀಡಲಾಗಿತ್ತು.
ಈ ಕುರಿತು ಮಾತನಾಡಿರುವ ಕ್ರಿಕೆಟ್ ಆಸ್ಟ್ರೇಲಿಯಾ ಮ್ಯಾನೇಜರ್ ಬೆನ್ ಒಲಿವರ್, "ವಿಲ್ ನಿರ್ಧಾರವನ್ನು ನಾವು ಬೆಂಬಲಿಸುತ್ತಿದ್ದೇವೆ. ಅವರು ತಮ್ಮ ಸಮಸ್ಯೆಯನ್ನು ನೇರವಾಗಿ ಹೇಳಿಕೊಂಡಿರುವುದಕ್ಕೆ ಬಹಳ ಖುಷಿಯಾಗಿದೆ. ಮಾನಸಿಕ ಆರೋಗ್ಯ ಎಲ್ಲಾ ಆಟಗಾರರಿಗೂ ಅತಿ ಮುಖ್ಯ. ಇದೇ ರೀತಿ ಸಮಸ್ಯೆಯಿಂದ ಬಳಲುತ್ತಿರುವವರು ಧೈರ್ಯವಾಗಿ ಹೇಳಿಕೊಳ್ಳಲು ವಿಲ್ ಸ್ಫೂರ್ತಿಯಾಗಲಿ. ವಿಲ್ ಸಂಪೂರ್ಣ ಗುಣಮುಖರಾದ ಮೇಲೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಬಾಗಿಲು ಅವರಿಗೆ ಸದಾ ತೆರೆದಿರುತ್ತದೆ" ಎಂದು ತಿಳಿಸಿದ್ದಾರೆ.
ಎರಡು ವಾರಗಳ ಹಿಂದೆ ಆಲ್ರೌಂಡರ್ ಮ್ಯಾಕ್ಸ್ವೆಲ್ ಹಾಗೂ ಕಳೆದ ವಾರ ನಿಕ್ ಮ್ಯಾಡಿನ್ಸನ್ ಕೂಡ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿ ಅನಿರ್ಧಿಷ್ಟಾವಧಿಗೆ ವಿಶ್ರಾಂತಿ ಪಡೆದಿದ್ದಾರೆ.