ಮುಂಬೈ: ಭಾರತ ತಂಡದ ನಾಯಕ ಎಂಎಸ್ ಧೋನಿ ಶನಿವಾರ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತ ಕ್ರಿಕೆಟ್ಗೆ 16 ವರ್ಷ ಸೇವೆ ಸಲ್ಲಿಸಿರುವ ಧೋನಿ ಅವರ ಜರ್ಸಿ ನಂಬರ್ 7 ಅನ್ನು ಬಿಸಿಸಿಐ ನಿವೃತ್ತಿಗೊಳಿಸಬೇಕೆಂದು ಹಲವಾರು ಹಾಲಿ-ಮಾಜಿ ಕ್ರಿಕೆಟಿಗರು ಆಗ್ರಹಪಡಿಸಿದ್ದಾರೆ.
ಭಾರತದ ವಿಕೆಟ್ ಕೀಪರ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ತಮ್ಮ ಟ್ವಿಟರ್ನಲ್ಲಿ , ಧೋನಿ ಜರ್ಸಿ ನಂಬರ್ 7 ಅನ್ನು ನಿವೃತ್ತಿಗೊಳಿಸಬೇಕೆಂದು ಬಿಸಿಸಿಐ ಮುಂದೆ ಬೇಡಿಕೆಯಿಟ್ಟಿದ್ದಾರೆ.
ಧೋನಿಯ ಜೊತೆ 2019ರ ವಿಶ್ವಕಪ್ ಸಂದರ್ಭದಲ್ಲಿ ತೆಗೆದುಕೊಂಡಿರುವ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿರುವ ಕಾರ್ತಿಕ್, ಬಿಸಿಸಿಐ ಜರ್ಸಿ ನಂಬರ್ 7 ಅನ್ನು ವೈಟ್ ಬಾಲ್ ಕ್ರಿಕೆಟ್ನಲ್ಲಿ ನಿವೃತ್ತಿಗೊಳಿಸಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿರುವ ಅವರು, ಧೋನಿ ಜೀವನದ 2ನೇ ಇನ್ನಿಂಗ್ಸ್ಗೆ ಶುಭಾಶಯ ಕೋರಿದ್ದಾರೆ.
ದಿನೇಶ್ ಕಾರ್ತಿಕ್ 2004ರಲ್ಲಿ ಧೋನಿಗಿಂತಲೂ 3 ತಿಂಗಳು ಮೊದಲು ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ್ದರು. ಆದರೆ ಧೋನಿ ಯಶಸ್ವಿಯಾಗಿದ್ದರಿಂದ ದಿನೇಶ್ ಕಾರ್ತಿಕ್ ಭಾರತೀಯ ಕ್ರಿಕೆಟ್ನಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ಆದರೂ ಅವರು 94 ಏಕದಿನ ಪಂದ್ಯ, 32 ಟಿ20 ಹಾಗೂ 26 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.
ದಿನೇಶ್ ಕಾರ್ತಿಕ್ ಹೊರತುಪಡಿಸಿ ಭಾರತ ಮಹಿಳಾ ತಂಡದ ಮಾಜಿ ಕೋಚ್, ಶಾಂತ ರಂಗಸ್ವಾಮಿ ಕೂಡ ಧೋನಿ ಜರ್ಸಿ ನಂಬರ್ 7 ಅನ್ನು ಬಿಸಿಸಿಐ ನಿವೃತ್ತಿಗೊಳಿಸಬೇಕು. ಅವರು ಅದಕ್ಕೆ ಅರ್ಹರಾಗಿದ್ದಾರೆ ಎಂದಿದ್ದಾರೆ.
ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಕೂಡ ತನ್ನ ಚಾಣಾಕ್ಷ್ಯ ನಾಯಕತ್ವದಿಂದ ಕೋಟ್ಯಂತರ ಅಭಿಮಾನಿಗಳ ಕನಸಾದ ವಿಶ್ವಕಪ್ ಗೆಲ್ಲಿಸಿಕೊಟ್ಟ ಧೋನಿ ಜರ್ಸಿ ನಂಬರ್ ಅನ್ನು ನಿವೃತ್ತಿಗೊಳಿಸಬೇಕೆಂದು ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ.
ಈ ಕ್ರಿಕೆಟಿಗರನ್ನು ಹೊರೆತುಪಡಿಸಿ ಕೋಟ್ಯಂತರ ಅಭಿಮಾನಿಗಳು ಕೂಡ ಧೋನಿ ಜರ್ಸಿ ನಂಬರ್ ನಿವೃತ್ತಿಗಳಿಸಬೇಕೆಂದು ಬಿಸಿಸಿಐ ಮೇಲೆ ಒತ್ತಡ ಹೇರಿದ್ದಾರೆ. ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ಕ್ರಿಕೆಟ್ ದೇವರಾದ ಸಚಿನ್ ತೆಂಡೂಲ್ಕರ್ ಅವರ ಜರ್ಸಿ ನಂಬರ್ 10 ಅನ್ನು ಮಾತ್ರ ಬಿಸಿಸಿಐ ನಿವೃತ್ತಿಗೊಳಿಸಿದೆ.