ಲಾಹೋರ್:ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಭಾರತ ವೀಸಾ ನೀಡುವ ಕುರಿತಾಗಿ ಲಿಖಿತ ಭರವಸೆ ನೀಡದಿದ್ದರೆ 2021ರ ಟಿ-20 ವಿಶ್ವಕಪ್ ಟೂರ್ನಿ ಸ್ಥಳಾಂತರ ಮಾಡಲು ಮನವಿ ಸಲ್ಲಿಸುತ್ತೇವೆ ಎಂದು ಪಿಸಿಬಿ ಮುಖ್ಯಸ್ಥ ಎಹ್ಸಾನ್ ಮಣಿ ಹೇಳಿದ್ದಾರೆ.
ಕಳೆದ ವರ್ಷ ಕೋವಿಡ್-19 ಕಾರಣ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ-20 ವಿಶ್ವಕಪ್ ಟೂರ್ನಿಯನ್ನು ಐಸಿಸಿ ಮುಂದೂಡಿದೆ. ಈ ವಿಶ್ವಕಪ್ 2022ಕ್ಕೆ ನಡೆಯಲಿದೆ. ಭಾರತದಲ್ಲಿ ಇದೇ ವರ್ಷ ಅಕ್ಟೋಬರ್ನಲ್ಲಿ ಟಿ-20 ವಿಶ್ವಕಪ್ ಆಯೋಜನೆಯಾಗಲಿದೆ.
"ನಮ್ಮ ಸರ್ಕಾರ ಭಾರತದಲ್ಲಿ ಕ್ರಿಕೆಟ್ ಆಡಬಾರದದೆಂದು ಹೇಳಿಲ್ಲ. ನಾವು ಐಸಿಸಿಯ ನಿರ್ಧಾರಕ್ಕೆ ಬದ್ಧರಾಗಿರಲು ಒಪ್ಪಿದ್ದೇವೆ ಮತ್ತು ವಿಶ್ವಕಪ್ನಲ್ಲಿ ಭಾಗವಹಿಸಲಿದ್ದೇವೆ. ಅಲ್ಲದೆ ಇದನ್ನು ನಾವು ವಿರೋಧಿಸಲು ಸಾಧ್ಯವಿಲ್ಲ. ಐಸಿಸಿ ಮಟ್ಟದಲ್ಲಿ ನಾನು ಸ್ಪಷ್ಟವಾಗಿ ಹೇಳಿರುವುದೇನೆಂದರೆ. ನಾವು ಭಾರತೀಯ ಸರ್ಕಾರದಿಂದ ವೀಸಾ ನೀಡುವ ಬಗ್ಗೆ ಲಿಖಿತ ಒಪ್ಪಿಗೆಯನ್ನು ಪಡೆಯಲು ಬಯಸುತ್ತೇವೆ. ಅಲ್ಲದೆ ಈ ವೀಸಾ ಕೇವಲ ತಂಡದ ಆಟಗಾರರಿಗೆ ಮಾತ್ರವಲ್ಲದೆ, ನಮ್ಮ ಅಭಿಮಾನಿಗಳಿಗೆ, ಪತ್ರಕರ್ತರಿಗೆ ಹಾಗೂ ಮಂಡಳಿಯ ಸಿಬ್ಬಂದಿಗೂ ಅಗತ್ಯವಿದೆ. ಇದು ಐಸಿಸಿಯ ಆಯೋಜನೆಯ ಒಪ್ಪಂದದಲ್ಲಿಯೂ ಇದೆ. ಹಾಗಾಗಿ ನಾವು ನಮ್ಮ ಬೇಡಿಕೆಯನ್ನು ಸಲ್ಲಿಸುತ್ತೇವೆ" ಎಂದು ಪಿಸಿಬಿ ಮುಖ್ಯಸ್ಥ ಎಹ್ಸಾನ್ ಮಣಿ ಹೇಳಿದ್ದಾರೆ.
"ಇದರ ಬಗ್ಗೆ ಐಸಿಸಿ ನಿರ್ಲಕ್ಷಿಸುತ್ತಿದೆ. ಅವರು ಹೇಳಿದಂತೆ ಇವೆಲ್ಲವೂ ಡಿಸೆಂಬರ್ 31, 2020ರ ವೇಳೆಗೆ ನಡೆಯಬೇಕಾಗಿತ್ತು. ಆದರೆ ಅದು ನಡೆದಿಲ್ಲ. ಹಾಗಾಗಿ ಜನವರಿ ಮತ್ತು ಫೆಬ್ರವರಿಯಲ್ಲಿ ನಾನು ನೇರವಾಗಿ ಐಸಿಸಿ ಅಧ್ಯಕ್ಷರ ಜೊತೆಗೆ ಮಾತುಕತೆ ನಡೆಸಿದ್ದೇನೆ. ಬಳಿಕ ಐಸಿಸಿ ನಿರ್ವಹಣಾ ಮಂಡಳಿಯ ಜೊತೆಯೂ ಮಾತುಕತೆ ನಡೆಸಿದ್ದೇನೆ ಮತ್ತು ಮಾರ್ಚ್ ಅಂತ್ಯದ ವೇಳೆಗೆ ಇದರ ಬಗ್ಗೆ ಸ್ಪಷ್ಟ ನಿರ್ಧಾರ ದೊರೆಯಬೇಕೆಂದು ಕೇಳಿದ್ದೇನೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಭಾರತದಲ್ಲಿ ನಡೆಯಬೇಕಾದ ಟೂರ್ನಿ ಯುಎಇನಲ್ಲಿ ನಡೆಸಬೇಕೇಂದು ನಾನು ಐಸಿಸಿ ಮುಂದೆ ಬೇಡಿಕೆ ಇಡುತ್ತೇನೆ" ಎಂದು ಪಿಸಿಬಿ ಅಧ್ಯಕ್ಷ ಹೇಳಿದ್ದಾರೆ.
ಐಸಿಸಿ ಕೂಡ ಬ್ಯಾಕ್ಅಪ್ ಪ್ಲಾನ್ ಹೊಂದಿದೆ. ಒಂದು ವೇಳೆ ಭಾರತ ವಿಶ್ವಕಪ್ ಆಯೋಜಿಸಲು ವಿಫಲರಾದರೆ, ಇದು ಪರ್ಯಾಯ ಸ್ಥಳದಲ್ಲಿ ನಡೆಯಲಿದೆ. ಅಲ್ಲದೆ ಸಾಂವಿಧಾನಿಕವಾಗಿ ಮತ್ತು ಕಾನೂನುಬದ್ಧವಾಗಿ ಟೂರ್ನಿಯಲ್ಲಿ ಭಾಗವಹಿಸುವುದು ನಮ್ಮ ಹಕ್ಕು. ಯಾರೂ ನಮ್ಮನ್ನು ಟೂರ್ನಿಯಿಂದ ಹೊರಹಾಕಲು ಸಾಧ್ಯವಿಲ್ಲ. ಐಸಿಸಿ ಅಧ್ಯಕ್ಷರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.