ಮುಂಬೈ: ಟೀಂ ಇಂಡಿಯಾ ಟೆಸ್ಟ್ ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಕನ್ನಡಿಗ ಕೆಎಲ್ ರಾಹುಲ್, ಕಳೆದ ಕೆಲ ಟೆಸ್ಟ್ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಹೀಗಾಗಿ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಹಿರಿಯ ಆಟಗಾರನಿಗೆ ಮಣೆ ಹಾಕಲು ಆಯ್ಕೆ ಸಮಿತಿ ಮುಂದಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧ ಮುಕ್ತಾಯಗೊಂಡ ಎರಡು ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಕೆಎಲ್ ರಾಹುಲ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಕಳೆದ ವಿಶ್ವಕಪ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿದು 5 ದಾಖಲೆಯ ಶತಕ ಬಾರಿಸಿರುವ ರೋಹಿತ್ ಶರ್ಮಾಗೆ ಟೆಸ್ಟ್ನಲ್ಲೂ ಆರಂಭಿಕರಾಗಿ ಕಣಕ್ಕಿಳಿಯಲು ಅವಕಾಶ ಸಿಗಲಿದೆ ಎಂದು ತಿಳಿದು ಬಂದಿದೆ.
ಎಂಎಸ್ಕೆ ಪ್ರಸಾದ್ ಮತ್ತು ರೋಹಿತ್ ಶರ್ಮಾ ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ಕೆ ಪ್ರಸಾದ್, ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡುವ 11ರಲ್ಲಿ ಚಾನ್ಸ್ ಪಡೆದುಕೊಳ್ಳಲಿದ್ದು, ಆರಂಭಿಕ ಸ್ಥಾನಕ್ಕೆ ಅವರನ್ನು ಆಡಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇಷ್ಟು ದಿನ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದ ಶರ್ಮಾ, ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿದಿರಲಿಲ್ಲ. ಇನ್ನು ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಅಜಿಂಕ್ಯ ರಹಾನೆ ಹಾಗೂ ಹನುಮ ವಿಹಾರಿ ಭರ್ಜರಿ ಬ್ಯಾಟಿಂಗ್ ಮಾಡಿರುವ ಕಾರಣ, ರೋಹಿತ್ ಶರ್ಮಾಗೆ ಆರಂಭಿಕರಾಗಿ ಬಡ್ತಿ ನೀಡುವ ಚಾನ್ಸ್ ದಟ್ಟವಾಗಿದೆ.
ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ಈಗಾಗಲೇ ನಾವು ಒಂದು ಸುತ್ತಿನ ಮಾತುಕತೆ ನಡೆಸಿದ್ದು, ರೋಹಿತ್ ಶರ್ಮಾಗೆ ಈ ಅವಕಾಶ ನೀಡುವ ಬಗ್ಗೆ ಮಾತನಾಡಿದ್ದೇವೆ. ಕೆಎಲ್ ರಾಹುಲ್ ಓರ್ವ ಅದ್ಭುತ ಬ್ಯಾಟ್ಸ್ಮನ್. ಆದರೆ ಇದೀಗ ವಿಕೆಟ್ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದಿದ್ದಾರೆ.