ಹೈದರಾಬಾದ್: ಇಂದು ಭಾರತೀಯ ವಾಯುಪಡೆ 88ನೇ ವಾರ್ಷಿಕೋತ್ಸವ. ಈ ಸಂಭ್ರಮದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಎಎಫ್ಗೆ ಶುಭಾಶಯ ಕೋರಿದ್ದು, "ನಿಮ್ಮ ತ್ಯಾಗಕ್ಕೆ ನಾವು ಸದಾ ಋಣಿಯಾಗುತ್ತೇವೆ" ಎಂದು ಗೌರವ ಸೂಚಿಸಿದ್ದಾರೆ.
" ನಮ್ಮ ರಾಷ್ಟ್ರವನ್ನು ನಿಸ್ವಾರ್ಥವಾಗಿ ರಕ್ಷಿಸುವ ಮತ್ತು ಸೇವೆ ಸಲ್ಲಿಸುವ ಭಾರತೀಯ ವಾಯುಪಡೆ ವೀರರಿಗೆ ನಮ್ಮ ಸೆಲ್ಯೂಟ್. ನಿಮ್ಮ ತ್ಯಾಗಕ್ಕೆ ನಾವು ಯಾವಾಗಲು ಋಣಿಯಾಗಿರುತ್ತೇವೆ" ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.
ಅಕ್ಟೋಬರ್ 8, 1932 ರಂದು ವಸಾಹತುಶಾಹಿ ಆಳ್ವಿಕೆಯಲ್ಲಿದ್ದ ಸಂದರ್ಭದಲ್ಲಿ ಐಎಎಫ್ ಅನ್ನು ಸ್ಥಾಪಿಸಿಲಾಯಿತು. ಅಂದಿನಿಂದ ಪ್ರತೀ ವರ್ಷ ಅಕ್ಟೋಬರ್ 8ರಂದು ಹಲವು ಯುದ್ಧಗಳಲ್ಲಿ ಭಾರತೀಯ ವಾಯುಸೇನೆಯು ಸಲ್ಲಿಸಿದ ಅನುಪಮ ಸೇವೆಯನ್ನು ಸ್ಮರಿಸುವ ಹಾಗೂ ವೀರ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಭಾರತೀಯ ವಾಯುಪಡೆ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಸ್ಥಾಪನೆಯಾದ ಸಂದರ್ಭದಲ್ಲಿ ವಾಯುಪಡೆಯನ್ನು ರಾಯಲ್ ಇಂಡಿಯನ್ ಏರ್‌ಫೋರ್ಸ್ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರದ ಬಳಿಕ ಇಂಡಿಯನ್ ಏರ್‌ಫೋರ್ಸ್ ಎಂದು ಮರುನಾಮಕರಣ ಮಾಡಲಾಗಿದೆ.
ಕೊಹ್ಲಿಯಲ್ಲದೆ ಭಾರತ ತಂಡದ ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ ಹಾಗೂ ಸಚಿನ್ ತೆಂಡೂಲ್ಕರ್ ಕೂಡ ಟ್ವೀಟ್ ಮಾಡುವ ಮೂಲಕ ಭಾರತೀಯ ವಾಯುಪಡೆಗೆ ಗೌರವ ಸೂಚಿಸಿದ್ದಾರೆ.