ಸೌತಾಂಪ್ಟನ್: ಇಂಗ್ಲೆಂಡ್ ವಿರುದ್ಧ ಮೊದಲ ಇನ್ನಿಂಗ್ಸ್ನಲ್ಲಿ 114 ರನ್ಗಳ ಮುನ್ನಡೆ ಸಾಧಿಸಿದ್ದ ವಿಂಡೀಸ್ ಪಡೆ, ಎರಡನೇ ಇನ್ನಿಂಗ್ಸ್ನಲ್ಲೂ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದೆ.
ಮೊದಲ ಇನ್ನಿಂಗ್ಸ್ನಲ್ಲಿ 204 ರನ್ಗಳಿಗೆ ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕಿದ್ದ ವಿಂಡೀಸ್ ಪಡೆ ಇದಕ್ಕುತ್ತರವಾಗಿ 318 ರನ್ ಗಳಿಸಿ 114 ರನ್ಗಳ ಮುನ್ನಡೆ ಕಾಯ್ದುಕೊಂಡಿತ್ತು.
ಇದೀಗ ಎರಡನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿರುವ ವಿಂಡೀಸ್ 4ನೇ ದಿನದಾಟದಲ್ಲಿ ಸ್ಟೋಕ್ಸ್ ಪಡೆಯ 8 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದೆ.
ಮೂರನೇ ದಿನದಾಟದಲ್ಲಿ ವಿಕೆಟ್ ನಷ್ಟವಿಲ್ಲದೆ 15 ರನ್ ಗಳಿಸಿದ್ದ ಇಂಗ್ಲೆಂಡ್ ನಾಲ್ಕನೇ ದಿನ 8 ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿ 170 ರನ್ಗಳ ಮುನ್ನಡೆ ಪಡೆದುಕೊಂಡಿದೆ. ಆರಂಭಿಕರಾದ ರೋನಿ ಬರ್ನ್ಸ್ 42, ಡಾಮ್ ಸಿಬ್ಲಿ 50, ಜೋ ಡೆನ್ಲಿ 29, ಜಾಕ್ ಕ್ರಾವ್ಲೀ 76, ಬೆನ್ ಸ್ಟೋಕ್ಸ್ 46 ರನ್ ಗಳಿಸಿದ್ದರು. ಆದರೆ ಉಪ ನಾಯಕ ಜಾಸ್ ಬಟ್ಲರ್ 9, ಒಲ್ಲಿ ಪಾಪ್ 12 ಮತ್ತೊಮ್ಮೆ ವಿಫಲರಾದರು.
5ನೇ ದಿನದಾಟದಂತ್ಯಕ್ಕೆ ಜೋಫ್ರಾ ಆರ್ಚರ್(5), ಮಾರ್ಕ್ವುಡ್(1) ರನ್ ಗಳಿಸಿ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ. ವಿಂಡೀಸ್ ಪರ ಗೇಬ್ರಿಯಲ್ 3 ವಿಕೆಟ್, ರಾಸ್ಟನ್ ಚೇಸ್, ಜೋಸೆಫ್ ತಲಾ ಎರಡು ವಿಕೆಟ್ ಹಾಗೂ ನಾಯಕ ಹೋಲ್ಡರ್ 1 ವಿಕೆಟ್ ಪಡೆದು ಮಿಂಚಿದರು.
ಕೊನೆಯ ದಿನದಾಟ ತೀವ್ರ ಕುತೂಹಲ ಮೂಡಿಸಿದ್ದು, ವಿಂಡೀಸ್ ಬೌಲರ್ಗಳು ಉಳಿದ ಎರಡು ವಿಕೆಟ್ಗಳನ್ನು ಬೇಗ ಪಡೆದಷ್ಟು ವಿಜಯಲಕ್ಷ್ಮೀ ಹತ್ತಿರವಾಗಲಿದ್ದಾಳೆ. ಕೊನೆಯ ದಿನ ಸಂಪೂರ್ಣ ಆಟ ನಡೆದರೆ ವಿಂಡೀಸ್ ತಂಡ ಇತಿಹಾಸ ನಿರ್ಮಿಸುವ ಸಾಧ್ಯತೆಯಿದೆ.