ಮುಂಬೈ:ಇಂಗ್ಲೆಂಡ್ನಲ್ಲಿ ನಡೆಯಲಿರುವ ವಿಶ್ವಕಪ್ನಲ್ಲಿ ಉದಯೋನ್ಮುಖ ಆಟಗಾರ ರಿಷಭ್ ಪಂತ್ ಆಡುವುದು ಕನ್ಫರ್ಮ್ ಎಂದಿದ್ದ ಆಯ್ಕೆ ಸಮಿತಿ,ಇದೀಗ ದಿಢೀರನೇ ಉಲ್ಟಾ ಹೊಡೆಯಲು ಅದೊಂದೇ ವಿಷಯ ಕಾರಣವಾಯ್ತಾ ಎಂಬ ಮಾತು ಗಂಭೀರವಾಗಿ ಕೇಳಿ ಬಂದಿದೆ.
ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಪಂತ್, ತದನಂತರ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಈ ವೇಳೆ, ಖುದ್ದಾಗಿ ಸ್ಪಷ್ಟನೆ ನೀಡಿದ್ದ ಎಂಎಸ್ಕೆ ಪ್ರಸಾದ್, ರಿಷಭ್ ಪಂತ್ ಖಂಡಿತವಾಗಿ 2019ರ ವಿಶ್ವಕಪ್ನ ನಮ್ಮ ಯೋಜನೆಯ ತಂಡದ ಭಾಗವಾಗಿದ್ದು,ಅವರಿಗೆ ವಿಶ್ರಾಂತಿ ಅಗತ್ಯವಿದ್ದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದರು.
ಇನ್ನು ಅವರ ಪರ ಅನೇಕ ಕ್ರಿಕೆಟ್ ದಿಗ್ಗಜರು ಸಹ ಬ್ಯಾಟ್ ಮಾಡಿ, ರಿಷಭ್ ಪಂತ್ ವಿಶ್ವಕಪ್ನಲ್ಲಿ ಆಡಬೇಕು ಎಂದಿದ್ದರು. ಆದರೆ ಇದೀಗ ಅವರ ಜಾಗಕ್ಕೆ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ಗೆ ಅವಕಾಶ ನೀಡಿ, ರಿಷಭ್ಗೆ ಕೈಬಿಡಲಾಗಿದೆ. ಇದು ಅನೇಕ ಟೀಕೆಗಳಿಗೆ ಕಾರಣವಾಗಿದೆ.
ಕೈಬಿಡಲು ಈ ವಿಷಯ ಕಾರಣವಾಯ್ತಾ!?
ನಿನ್ನೆ ತಂಡದ ಆಯ್ಕೆ ನಂತರ ಮಾತನಾಡಿರುವ ಎಂಎಸ್ಕೆ, ವಿಶ್ವಕಪ್ನಲ್ಲಿ ಧೋನಿ ಗಾಯಗೊಂಡರೆ ಮಾತ್ರ ದ್ವಿತೀಯ ವಿಕೆಟ್ ಕೀಪರ್ ಆಡಲಿದ್ದಾರೆ. ಈ ವೇಳೆ ವಿಕೆಟ್ ಕೀಪಿಂಗ್ ಮಹತ್ವ ಪಡೆದುಕೊಳ್ಳುವ ಕಾರಣ, ಒಂದು ವೇಳೆ ತಂಡ ಕ್ವಾರ್ಟರ್ ಅಥವಾ ಸೆಮಿಫೈನಲ್ನಲ್ಲಿ ಆಡುತ್ತಿದ್ದರೆ ತಂಡಕ್ಕೆ ವಿಕೆಟ್ ಕೀಪಿಂಗ್ ಬಹಳ ಅವಶ್ಯಕತೆ ಇದೆ. ಅನುಭವದ ಆಧಾರದಲ್ಲಿ ದಿನೇಶ್ ಕಾರ್ತಿಕ್ ಆಯ್ಕೆ ಮಾಡಲಾಗಿದೆ. ಅವರಿಗೆ ಮಹತ್ವದ ಪಂದ್ಯಗಳಲ್ಲಿ ಆಡಿದ ಅನುಭವವಿದೆ ಎಂದಿರುವ ಅವರು, ರಿಷಭ್ ಬಳಿ ಕೂಡ ಉತ್ತಮ ಸಾಮರ್ಥ್ಯವಿದೆ ಎಂದಿದ್ದಾರೆ. ಆಯ್ಕೆ ಸಮಿತಿ ಈ ನಿರ್ಧಾರದಿಂದ ಸುನಿಲ್ ಗವಾಸ್ಕರ್ ಸೇರಿದಂತೆ ಅನೇಕ ಕ್ರಿಕೆಟ್ ದಿಗ್ಗಜರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಎಂಎಸ್ಕೆ ಹೇಳುವ ಪ್ರಕಾರ, ರಿಷಭ್ ಪಂತ್ ಇನ್ನು ವಿಕೆಟ್ ಕೀಪಿಂಗ್ನಲ್ಲಿ ಬಹಳಷ್ಟು ಕಲಿಯಬೇಕಾಗಿರುವ ಕಾರಣ, ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ಅವರ ಮಾತಿನ ಮರ್ಮವಾಗಿದೆ.
ಇನ್ನು ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ರಿಷಭ್ ಪಂತ್, ದಿನೇಶ್ ಕಾರ್ತಿಕ್ಗಿಂತಲೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇಲ್ಲಿಯವರೆಗೆ ಪಂತ್ 245ರನ್ಗಳಿಕೆ ಮಾಡಿದ್ದರೆ, ಕಾರ್ತಿಕ್ 111ರನ್ ಗಳಿಕೆ ಮಾಡಿದ್ದಾರೆ.