ಮುಂಬೈ: ದೇಶದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿರುವುದರಿಂದ ಎಲ್ಲಾ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೀರ್ಘ ಸಮಯದವರೆಗೆ ಯಾವುದೇ ಮಾದರಿಯ ಕ್ರಿಕೆಟ್ ಚಾಲ್ತಿಯಲ್ಲಿಲ್ಲದ ಈ ಸಂದರ್ಭದಲ್ಲಿ ಆಟಗಾರರು ತಮ್ಮ ಹಳೆಯ ನೆನಪುಗಳನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಭಾರತ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ದಶಕಗಳ ಹಿಂದಿನ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಆಶೀಶ್ ನೆಹ್ರಾ, ವಿರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಹಾಗೂ ಯುವರಾಜ್ ಸಿಂಗ್ ಕಾಯಿನ್ ಬೂತ್ ವೊಂದರಲ್ಲಿ ಮಾತನಾಡುತ್ತಿರುವ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.