ಲಂಡನ್: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಎರಡೂ ಇನ್ನಿಂಗ್ಸ್ ಸೇರಿ 8 ವಿಕೆಟ್ ಪಡೆದಿದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ವೃತ್ತಿ ಜೀವನದಲ್ಲೇ ಮೊದಲ ಬಾರಿಗೆ 2 ನೇ ಶ್ರೇಯಾಂಕ ಪಡೆಯುವುದರ ಜೊತೆಗೆ 20 ವರ್ಷಗಳ ಬಳಿಕ ವಿಂಡೀಸ್ ಪರ ಎರಡನೇ ಅತಿ ಹೆಚ್ಚು ರೇಟಿಂಗ್ ಅಂಕ ಸಂಪಾದಿಸಿ ದಾಖಲೆ ಬರೆದಿದ್ದಾರೆ.
ಮಂಗಳವಾರ ಐಸಿಸಿ ಬಿಡುಗಡೆ ಮಾಡಿದ ನೂತನ ಟೆಸ್ಟ್ ಶ್ರೇಯಾಂಕದಲ್ಲಿ ಹೋಲ್ಡರ್ ಕಿವೀಸ್ ಬೌಲರ್ ನೀಲ್ ವ್ಯಾಗ್ನರ್ ಅವರನ್ನು ಹಿಂದಿಕ್ಕಿ 2ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವ್ಯಾಗ್ನರ್ 843 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.
ವಿಂಡೀಸ್ ಪರ ಅತಿ ಹೆಚ್ಚು ರೇಟಿಂಗ್ ಅಂಕ ಪಡೆದ 2ನೇ ಬೌಲರ್
ವೃತ್ತಿ ಜೀವನದ ಶ್ರೇಷ್ಠ ಶ್ರೇಯಾಂಕ ಪಡೆಯುವುದರ ಜೊತೆಗೆ ಹೋಲ್ಡರ್ 862 ರೇಟಿಂಗ್ ಅಂಕಗಳನ್ನು ಪಡೆಯುವ ಮೂಲಕ ಕರ್ಟ್ನಿ ವಾಲ್ಸ್ ಬಳಿಕ ಇಷ್ಟು ಅಂಕ ಪಡೆದ ಎರಡನೇ ಬೌಲರ್ ಎನಿಸಿಕೊಂಡರು. 2000ನೇ ಇಸವಿಯಲ್ಲಿ ಕರ್ಟ್ನಿ ವಾಲ್ಸ್ 866 ಅಂಕಗಳನ್ನು ಸಂಪಾದಿಸಿದ್ದರು. ಇದು ವೆಸ್ಟ್ ಇಂಡೀಸ್ ಬೌಲರ್ ಒಬ್ಬರ ಶ್ರೇಷ್ಠ ಸಾಧನೆಯಾಗಿದೆ.
ಹೋಲ್ಡರ್ ಆಲ್ರೌಂಡರ್ ಶ್ರೇಯಾಂಕದಲ್ಲಿ ತಮ್ಮ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಸ್ಟೋಕ್ಸ್ 2 ಹಾಗೂ ರವೀಂದ್ರ ಜಡೇಜಾ 3ನೇ ಸ್ಥಾನದಲ್ಲಿದ್ದಾರೆ.
ಇಂಗ್ಲೆಂಡ್ ವಿರುದ್ದ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡ ಮೊದಲ ಪಂದ್ಯವನ್ನು 4 ವಿಕೆಟ್ಗಳಿಂದ ಜಯ ಸಾಧಿಸುವ ಮೂಲಕ 1-0ಯಲ್ಲಿ ಸರಣಿ ಮುನ್ನಡೆ ಪಡೆದುಕೊಂಡಿದೆ.