ಲಂಡನ್:ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ದೈತ್ಯ ಆಟಗಾರ ಕ್ರಿಸ್ ಗೇಲ್ ಯಾವಾಗ ನಿವೃತ್ತಿ ಪಡೆದುಕೊಳ್ಳಲಿದ್ದಾರೆ ಎಂಬುದರ ಮಾಹಿತಿ ಇದೀಗ ರಿವೀಲ್ ಮಾಡಿದ್ದಾರೆ. ವಿಶ್ವಕಪ್ ಮುಕ್ತಾಯದ ಬಳಿಕ ವೆಸ್ಟ್ ಇಂಡೀಸ್ನಲ್ಲಿ ಟೀಂ ಇಂಡಿಯಾ ವಿರುದ್ಧ ನಡೆಯುವ ಏಕದಿನ ಹಾಗೂ ಟೆಸ್ಟ್ ಸರಣಿ ಬಳಿಕ ತಾವು ಕ್ರಿಕೆಟ್ ಬದುಕಿಗೆ ವಿರಾಮ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.
ವಿಶ್ವಕಪ್ನಲ್ಲಿ ನಾಳೆ ಟೀಂ ಇಂಡಿಯಾ ವಿರುದ್ಧ ವೆಸ್ಟ್ ಇಂಡೀಸ್ ಸೆಣಸಾಟ ನಡೆಸಲಿದ್ದು, ಇದೇ ವೇಳೆ, ಗೇಲ್ ತಮ್ಮ ಭವಿಷ್ಯದ ಜೀವನದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಈ ಹಿಂದೆ ವಿಶ್ವಕಪ್ ಮುಕ್ತಾಯದ ಬಳಿಕ ತಾವು ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡುವುದಾಗಿ ಗೇಲ್ ತಿಳಿಸಿದ್ದರು. ಆದರೆ, ಇದೀಗ ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಪಂದ್ಯದ ಬಳಿಕ ತಾವೂ ವಿದಾಯ ಘೋಷಣೆ ಮಾಡುವುದಾಗಿ ಹೇಳಿದ್ದು, ಟಿ-20 ಸರಣಿಯಲ್ಲಿ ಭಾಗಿಯಾಗಲ್ಲ ಎಂದಿದ್ದಾರೆ.
ಟೀಂ ಇಂಡಿಯಾ ವಿರುದ್ಧ ಆಗಸ್ಟ್-ಸೆಪ್ಟೆಂಬರ್ನಲ್ಲಿ ವೆಸ್ಟ್ ಇಂಡೀಸ್ ಏಕದಿನ, ಟೆಸ್ಟ್ ಹಾಗೂ ಟಿ-20 ಟೂರ್ನಿ ಆಡಲಿದ್ದು, ಇದೇ ವೇಳೆ ಗೇಲ್ ನಿವೃತ್ತಿ ಘೋಷಣೆ ಮಾಡಲಿದ್ದಾರೆ. ಈ ಹಿಂದೆ ಸ್ಟೀವ್ ವಾ (2004) ಹಾಗೂ ಜಾಕ್ ಕಾಲಿಸ್(2013)ರಲ್ಲಿ ಭಾರತದ ವಿರುದ್ಧ ಪಂದ್ಯವನ್ನಾಡಿದ ಬಳಿಕ ನಿವೃತ್ತಿ ಘೋಷಣೆ ಮಾಡಿದ್ದರು. ಇದೀಗ ಅವರ ಹಾದಿಯನ್ನೇ ಗೇಲ್ ಕೂಡ ತುಳಿಯಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಆಗಸ್ಟ್ 3ರಿಂದ ಟಿ-20 ಪಂದ್ಯದಲ್ಲಿ ಭಾಗಿಯಾಗಲಿದ್ದು, ಆಗಸ್ಟ್ 8ರಿಂದ ಏಕದಿನ ಸರಣಿ ಹಾಗೂ ಆಗಸ್ಟ್ 22ರಿಂದ ಸೆಪ್ಟೆಂಬರ್ 3ರವರೆಗೆ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದೆ.
39 ವರ್ಷದ ಗೇಲ್ 103 ಟೆಸ್ಟ್ ಪಂದ್ಯಗಳನ್ನಾಡಿದ್ದು, 7215ರನ್ಗಳಿಸಿದ್ದು, 294 ಏಕದಿನ ಪಂದ್ಯಗಳಿಂದ 10345ರನ್ ಹಾಗೂ 58 ಟಿ-20 ಪಂದ್ಯಗಳಿಂದ 1627ರನ್ಗಳಿಕೆ ಮಾಡಿದ್ದಾರೆ. ಕ್ರಿಕೆಟ್ ಪಂದ್ಯದಲ್ಲಿ ಸಿಕ್ಸರ್ಗಳ ಸುರಿಮಳೆಗೈಯುವ ಗೇಲ್ಗೆ 'ಯುನಿವರ್ಸಲ್ ಬಾಸ್' ಎಂಬ ಹೆಸರು ಇದೆ.