ಪಲ್ಲೆಕೆಲೆ: ಏಕದಿನ ಸರಣಿಯನ್ನು 3-0ಯಲ್ಲಿ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ತೆಗೆದುಕೊಂಡ ವಿಂಡೀಸ್ ಮೊದಲ ವಿಕೆಟ್ಗೆ 74 ರನ್ ಪೇರಿಸಿ ಭರ್ಜರಿ ಆರಂಬ ಪಡೆಯಿತು. ಯುವ ಆಟಗಾರ ಬ್ರೆಂಡನ್ ಕಿಂಗ್ 25 ಎಸೆತಗಳಲ್ಲಿ 33 ರನ್ಗಳಿಸಿದರೆ, ಲೆಂಡ್ಲ್ ಸಿಮ್ಮನ್ಸ್ 51 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 67 ರನ್ ಗಳಿಸಿ ಔಟಾಗದೆ ಉಳಿದರು. ಪೊಲಾರ್ಡ್ 34, ರಸೆಲ್ ಕೇವಲ 14 ಎಸೆತಗಳಲ್ಲಿ 4 ಸಿಕ್ಸರ್, 2 ಬೌಂಡರಿ ನೆರವಿನಿಂದ 35 ರನ್ ಗಳಿಸಿದರು. ಒಟ್ಟಾರೆ ವಿಂಡೀಸ್ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 196 ರನ್ ಗಳಿಸಿತು.
ಶ್ರೀಲಂಕಾ ಪರ ಮಾಲಿಂಗ 37ಕ್ಕೆ 1, ಉದಾನ 41ಕ್ಕೆ 1, ಸಂದಕನ್ 38ಕ್ಕೆ 1 ಹಾಗೂ ಹಸರಂಗ 33 ರನ್ ನೀಡಿ ಒಂದು ವಿಕೆಟ್ ಪಡೆದರು.
297 ರನ್ಗಳ ಗುರಿ ಬೆನ್ನತ್ತಿದ ಲಂಕಾ ಪವರ್ ಪ್ಲೇ ಒಳಗೆ ಪ್ರಮುಖ 5 ಬ್ಯಾಟ್ಸ್ಮನ್ಗಳ ವಿಕೆಟ್ ಕಳೆದುಕೊಂಡಿತು. ಆರಂಭಿಕರಾದ ಫರ್ನಾಂಡೊ 7, ಶೆಹಾನ್ ಜಯಸೂರ್ಯ, ಕುಸಾಲ್ ಮೆಂಡಿಸ್ ಡಕೌಟ್, ಮ್ಯಥ್ಯೂಸ್ 10 ಹಾಗೂ ದಾಸುನ್ ಶನಾಕ ರನ್ ಗಳಿಸಿ ಯುವ ವೇಗಿ ಒಸೇನ್ ಥಾಮಸ್ಗೆ ವಿಕೆಟ್ ಒಪ್ಪಿಸಿದರು.
ಆದರೆ 6ನೇ ವಿಕೆಟ್ ಜೊತೆಯಾಟದಲ್ಲಿ ಒಂದಾದ ಕುಸಾಲ್ ಪೆರೆರಾ(66) ಹಾಗೂ ವನಿಡು ಹಸರಂಗ(44) 87 ರನ್ಗಳ ಜೊತೆಯಾಟ ನೀಡಿ ವಿಂಡೀಸ್ ಪಾಳೆಯದಲ್ಲಿ ಸೋಲಿನ ಭೀತಿ ಮೂಡಿಸಿದರು. ಆದರೆ ರೋವ್ಮನ್ ಪೊವೆಲ್ ಹಸರಂಗ ವಿಕೆಟ್ ಪಡೆದು ವಿಂಡೀಸ್ಗೆ ಬ್ರೇಕ್ ಕೊಟ್ಟರು. ನಂತರದ ಓವರ್ನಲ್ಲಿ ರಸೆಲ್ ಪೆರೆರಾ ವಿಕೆಟ್ ಪಡೆಯುವ ಮೂಲಕ ವಿಂಡೀಸ್ಗೆ ಗೆಲುವು ಖಚಿತ ಪಡಿಸಿದರು. ಕುಸಾಲ್ ಪೆರೆರಾ ಈ ವೇಳೆ 38 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 6 ಬೌಂಡರಿ ಸಹಿತ 66 ರನ್ ಗಳಿಸಿದ್ದರು.
ತಿಸೆರಾ ಪೆರೆರಾ 11 ರನ್ ಗಳಿಸಿ ಪೊವೆಲ್ಗೆ, ಉದಾನ 3 ರನ್ ಗಳಿಸಿ ಬ್ರಾವೋಗೆ, ಮಾಲಿಂಗ 8 ರನ್ ಗಳಿಸಿ ಕಾಟ್ರೆಲ್ಗೆ ವಿಕೆಟ್ ಒಪ್ಪಿಸಿದರು. ಶ್ರೀಲಂಕಾ 19.1 ಓವರ್ಗಳಲ್ಲಿ 171 ರನ್ಗಳಿಗೆ ಆಲೌಟ್ ಆಗುವ ಮೂಲಕ 25 ರನ್ಗಳ ಸೋಲು ಕಂಡಿತು.