ಕೋಲ್ಕತ್ತಾ: ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಬಂಗಾಳವನ್ನು 161 ರನ್ಗಳಿಗೆ ಆಲೌಟ್ ಮಾಡಿರುವ ಕರ್ನಾಟಕ ಫೈನಲ್ ತಲುಪಬೇಕಾದರೆ 352 ರನ್ಗಳ ಬೃಹತ್ ಮೊತ್ತವನ್ನು ಚೇಸ್ ಮಾಡಬೇಕಿದೆ.
ಪಶ್ಚಿಮ ಬಂಗಾಳ ಮೊದಲ ಇನ್ನಿಂಗ್ಸ್ನಲ್ಲಿ 312 ರನ್ಗಳಿಸಿತ್ತು. ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ನಲ್ಲಿ ಕರ್ನಾಟಕ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 122 ರನ್ಗಳಿಗೆ ಆಲೌಟ್ ಆಗಿ 190ರನ್ಗಳ ಹಿನ್ನಡೆ ಅನುಭವಿಸಿತ್ತು. ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಕರ್ನಾಟಕ ಬಂಗಾಳವನ್ನು 161 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಆದರೂ ಕರ್ನಾಟಕ ಫೈನಲ್ ತಲುಪಬೇಕಾದರೆ 351 ರನ್ಗಳನ್ನು ಚೇಸ್ ಮಾಡುವ ಕಠಿಣ ಸವಾಲನ್ನು ಸ್ವೀಕರಿಸಿದೆ.
ನಿನ್ನೆ 74ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಬಂಗಾಳ ಮೂರನೇ ದಿನವಾದ ಇಂದು ಆ ಮೊತ್ತಕ್ಕೆ 87 ರನ್ಗಳನ್ನು ಸೇರಿಸಿ ಸರ್ವಪತನ ಕಂಡಿತು. 40 ರನ್ಗಳಿಸಿದ್ದ ನೈಟ್ ವಾಚ್ಮನ್ ಸುದೀಪ್ ಚಟರ್ಜಿ 45 ರನ್ಗಳಿಸಿ ಔಟಾದರು. ಮಜುಮ್ದಾರ್ 41 ರನ್ಗಳಿಸಿದರು. ಆದರೆ ಉಳಿದ ಬ್ಯಾಟ್ಸ್ಮನ್ಗಳು ರನ್ಗಳಿಸಿದಂತೆ ತಡೆಯುವಲ್ಲಿ ಕರ್ನಾಟಕ ಬೌಲರ್ಗಳು ಯಶಸ್ವಿಯಾದರು.
ಅಭಿಮನ್ಯು ಮಿಥುನ್ 4, ಕೆ ಗೌತಮ್ 3, ರೋನಿತ್ ಮೋರೆ 2, ಹಾಗೂ ಪ್ರಸಿದ್ ಕೃಷ್ಣ ಒಂದು ವಿಕೆಟ್ ಪಡೆದು ಮಿಂಚಿದರು.
ಒಟ್ಟಾರೆ 352 ರನ್ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಭರವಸೆಯ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಅಂಪೈರ್ ನೀಡಿದ ಕೆಟ್ಟ ತೀರ್ಪಿಗೆ ಮೊದಲ ಓವರ್ನಲ್ಲೇ ಬಲಿಯಾದರು. ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ದೇವದತ್ ಪಡಿಕ್ಕಲ್ಎರಡನೇ ವಿಕೆಟ್ಗೆ ಸಮರ್ಥ್ ಜೊತೆ 57 ರನ್ಗಳ ಜೊತೆಯಾಟ ನಡೆಸಿ ಆಘಾತದಿಂದ ಪಾರು ಮಾಡಿದರು. ಆದರೆ 26 ರನ್ಗಳಿಸಿದ್ದ ಸಮರ್ಥ್ ಆಕಾಶ್ ದೀಪ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು. ನಂತರ ಬಂದ ನಾಯಕ ಕರುಣ್ ನಾಯರ್ 6 ರನ್ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಮತ್ತೆ ವೈಫಲ್ಯ ಅನುಭವಿಸಿದರು.
ಆದರೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ ಯುವ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ 109 ಎಸೆತಗಳಲ್ಲಿ 50 ರನ್ಗಳಿಸಿ ಔಟಾಗದೆ ಉಳಿದಿದ್ದಾರೆ. ಇವರ ಜೊತೆಗೆ 11 ರನ್ಗಳಿಸಿರುವ ಮನೀಷ್ ಪಾಂಡೆ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.
ಪಂದ್ಯ ಗೆಲ್ಲಲು ಕರ್ನಾಟಕ ತಂಡಕ್ಕೆ ಇನ್ನು 254 ರನ್ಗಳ ಅಗತ್ಯವಿದ್ದು 2 ದಿನಗಳ ಆಟ ಬಾಕಿಯುಳಿದಿದೆ. ಈಗಾಗಲೆ ಪ್ರಮುಖ 3 ವಿಕೆಟ್ ಕಳೆದುಕೊಂಡಿರುವ ರಾಜ್ಯ ತಂಡಕ್ಕೆ ಅನುಭವಿ ಮನೀಷ್ ಪಾಂಡೆ ಹಾಗೂ ಪಡಿಕ್ಕಲ್ ಆಟ ಬಹಳ ಪ್ರಮುಖವಾಗಿದೆ.