ಅಡಿಲೇಡ್:2016ರ ಟಿ-20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತೋರಿದ ಉತ್ತಮ ಪ್ರದರ್ಶನ ತನ್ನ ನೆಚ್ಚಿನ ಆಟವಾಗಿದೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಲಿದ್ದಾರೆ.
ಆಸೀಸ್ ವಿರುದ್ಧ ಕೊಹ್ಲಿ ಕೇವಲ 51 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿದ್ದರು. ರನ್ ಮಷಿನ್ ವಿರಾಟ್ ಅವರ ಉತ್ತಮ ಪ್ರದರ್ಶನದಿಂದ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ ಸೆಮಿಫೈನಲ್ಗೆ ಅರ್ಹತೆ ಪಡೆದಿತ್ತು.
ಆಸೀಸ್ ಆಟಗಾರ ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿಯ ಸಂದರ್ಶನ ನಡೆಸಿರುವ ವಿಡಿಯೋವನ್ನು ಬಿಸಿಸಿಐ ಪೋಸ್ಟ್ ಮಾಡಿದೆ. ಈ ವಿಡಿಯೋದಲ್ಲಿ ವಿರಾಟ್ ತಮ್ಮ ನೆಚ್ಚಿನ ಇನ್ನಿಂಗ್ಸ್ ಬಗ್ಗೆ ಮಾತನಾಡಿದ್ದಾರೆ.
2012ರಲ್ಲಿ ಪಾಕಿಸ್ತಾನ ತಂಡದ ವಿರುದ್ಧ 183 ರನ್ ಗಳಿಸಿದ್ದು ತುಂಬಾ ವಿಶೇಷವಾಗಿದೆ. ಅಂದು ನಾವು ಪಾಕ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿ 330 ರನ್ ಬೆನ್ನಟ್ಟಿದ್ದೆವು. ಅಂದಿನ ನನ್ನ ಪ್ರದರ್ಶನ ನನಗೆ ವಿಶೇಷವಾಗಿದೆ. ಆದರೆ ಆಸ್ಟ್ರೇಲಿಯಾ ವಿರುದ್ಧ 2016ರ ಟಿ-20 ವಿಶ್ವಕಪ್‌ನಲ್ಲಿ ಆಡಿದ ಇನ್ನಿಂಗ್ಸ್ ನನ್ನ ನೆಚ್ಚಿನ ಆಟವಾಗಿದೆ ಎಂದಿದ್ದಾರೆ.
"ನನಗೆ ಅಕ್ಷರಶಃ ಗೊತ್ತಿಲ್ಲ, ನಾನು ಇದ್ದಕ್ಕಿದ್ದಂತೆ ಬೇರೆ ರಿತಿ ಬ್ಯಾಟ್ ಬೀಸಿದೆ. ಗುರಿ ಕಷ್ಟ ಎಂದು ಅನಿಸುತ್ತಿತ್ತು. ಆದರು ಹೇಗೆ ಸಾಧ್ಯವಾಯಿತು ಎಂದು ಇಲ್ಲಿಯವರೆಗೂ ನನಗೆ ಅರ್ಥವಾಗುತ್ತಿಲ್ಲ. ಮತ್ತು ನಾನು ಹೊಡೆದ ಎಲ್ಲಾ ಚೆಂಡುಗಳು ಬೌಂಡರಿಗೆ ಹೋಗುತ್ತಿದ್ದವು" ಎಂದಿದ್ದಾರೆ.
ಭಾರತಕ್ಕೆ ಕೊನೆಯ ಆರು ಓವರ್‌ಗಳಲ್ಲಿ 67 ರನ್‌ಗಳ ಅಗತ್ಯವಿತ್ತು. ಆಸ್ಟ್ರೇಲಿಯಾ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ವಿರಾಟ್ ಒಂಭತ್ತು ಬೌಂಡರಿ ಮತ್ತು ಎರಡು ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ರು.