ದುಬೈ:2015ರಲ್ಲಿ ಮಂಡಿ ನೋವಿಗೆ ಒಳಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಹೊರಬಿದ್ದಿದ್ದ ಮೊಹಮ್ಮದ್ ಶಮಿ, ಅಂದು ಅನುಭವಿಸಿದ್ದ ನೋವು ಹಾಗೂ ಅವರ ವೃತ್ತಿ ಜೀವನ ಅಂತ್ಯಗೊಳ್ಳುತ್ತಿದೆ ಎಂಬ ಊಹಾಪೋಹಗಳ ವರದಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಭಾರತದ ಮಂಚೂಣಿ ಬೌಲರ್ ಆಗಿರುವ ಶಮಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ನಲ್ಲಿ ನಡೆದಿದ್ದ 2015ರ ವಿಶ್ವಕಪ್ ವೇಳೆ ಗಂಭೀರವಾಗಿದ್ದ ಮಂಡಿನೋವಿನಲ್ಲಿ ಆಡಿದ್ದ ಮಾಹಿತಿಯನ್ನು ಹೊರ ಹಾಕಿದ್ದಾರೆ. ಆದರೂ ಟೂರ್ನಿಯಲ್ಲಿ ಗರಿಷ್ಠ ವಿಕೆಟ್(7 ಪಂದ್ಯ,17ವಿಕೆಟ್) ಪಡೆದ 2ನೇ ಭಾರತೀಯ ಬೌಲರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು. ಉಮೇಶ್ ಯಾದವ್(18) ಮೊದಲ ಸ್ಥಾನದಲ್ಲಿದ್ದಾರೆ. ಅಲ್ಲದೇ ಟೂರ್ನಿಯಲ್ಲಿ 4ನೇ ಗರಿಷ್ಠ ವಿಕೆಟ್ ಪಡೆದವರಾಗಿದ್ದರು.
" 2015 ರಲ್ಲಿ ಮತ್ತು 2018 ರಲ್ಲಿ ನಾನು ಗಾಯಗೊಂಡಾಗ, ಮಾಧ್ಯಮಗಳು ನನ್ನ ವೃತ್ತಿಜೀವನವು ಮುಗಿದೇ ಹೋಗುತ್ತದೆ ಎಂದು ಹೇಳಿದ್ದವು. ನಾನು ಮತ್ತೆ ತಂಡಕ್ಕೆ ಹಿಂತಿರುಗಿದರೂ ಹಿಂದಿನ ಶಮಿಯಾಗಿ ಉಳಿದಿರುವುದಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಗಾಯದ ನಂತರ ನಾನು ಕೆಲವು ವರ್ಷಗಳ ಹಿಂದಿನ ಶಮಿ ಆಗಿರುವುದಿಲ್ಲ ಎಂಬುದನ್ನ ನಾನೂ ಕೂಡ ಒಪ್ಪಿಕೊಳ್ಳುತ್ತೇನೆ," ಎಂದು ಶಮಿ ಹೇಳಿದ್ದಾರೆ.
"ಆ ವರದಿಯಲ್ಲಿ ಪ್ರಕಟವಾಗಿದ್ದ ವಿಚಾರಗಳಲ್ಲಿ ನಾನು ಹಿಂದಿನ ಶಮಿಯಾಗಿರುವುದಿಲ್ಲ ಎಂಬ ಮಾತು ಮಾತ್ರ ಸರಿಯಾದದ್ದಾಗಿತ್ತು. ಆ ಒಂದು ಕಾಮೆಂಟ್ ನನಗೆ ಪ್ರೇರಣೆ ನೀಡಿತು. ಆಟದಲ್ಲಿ ನನಗೆ ತಿಳಿದಿರುವುದಕ್ಕಿಂತ ಹೆಚ್ಚು ಅತ್ಯುತ್ತಮವಾದದ್ದನ್ನು ತೋರುವುದಕ್ಕೆ ಪ್ರೇರೇಪಿಸಿತು" ಎಂದು ತಮ್ಮ ಕಮ್ಬ್ಯಾಕ್ ಯಶಸ್ಸಿನ ಸ್ಟೋರಿಯನ್ನು ಹೇಳಿದ್ದಾರೆ.
ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುತ್ತಿರುವ ಬಲಗೈ ವೇಗಿ, ಮಾನಸಿಕ ಸಾಮರ್ಥ್ಯದ ಮಹತ್ವವನ್ನು ಒತ್ತಿ ಹೇಳಿದ್ದಾರೆ.
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಾವುದಾದರೂ ಸಮಸ್ಯೆಯನ್ನು ಎದುರಿಸುತ್ತಾರೆ. ಅವರು ಗುರಿಯನ್ನು ಹೊಂದಲು ಮತ್ತು ಅದನ್ನು ಅದನ್ನು ಸಾಧಿಸಲು ಒಂದು ಚಾರ್ಟ್ ತಯಾರಿಸಿ ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕಾಗುತ್ತದೆ. ಪ್ರತಿಯೊಬ್ಬರು ಸರಿಯಾದ ದಿಕ್ಕಿನಲ್ಲಿ ಕೆಲಸ ಮಾಡಲು ಕಠಿಣ ಹಂತವನ್ನು ಎದುರಿಸಬೇಕಾಗುತ್ತದೆ ಎಂದು ನಾನು ನಂಬುತ್ತೇನೆ ಎಂದು ಶಮಿ ಹೇಳಿದ್ದಾರೆ.
"ಗಾಯದ ನಂತರ ದಿನಗಳಲ್ಲಿ ನನ್ನ ತೂಕ ಸಮಾರು 95 ಕೆಜಿಗೆ ಹೆಚ್ಚಾಗಿತ್ತು. ಆ ಸಂದರ್ಭದಲ್ಲಿ ಜನರು ಹೇಳುತ್ತಿರುವುದು ನಿಜವೆಂದು ನಾನು ಭಾವಿಸಿದ್ದೆ. ನಾನು ಏನು ಮಾಡಲು ಸಾಧ್ಯವಿರಲಿಲ್ಲ . ಏಕೆಂದರೆ ನಾನು 60 ದಿನಗಳ ಕಾಲ ಬೆಡ್ ರೆಸ್ಟ್ನಲ್ಲಿದ್ದೆ. ಆದರೆ, ಅಷ್ಟೂ ದಿನಗಳ ಕಾಲ ನನ್ನ ಪಕ್ಕದಲ್ಲಿ ಚೆಂಡು ಇರುತ್ತಿತ್ತು. ನನ್ನಲ್ಲಿ ಆತ್ಮ ವಿಶ್ವಾಸ ಕೂಡ ಇತ್ತು. ಹಾಗಾಗಿ ಇಂದು ಇಲ್ಲಿದ್ದೇನೆ. ನೀವು ಜೀವನದಲ್ಲಿ ಯಾವುದೇ ವಿಷಯಗಳನ್ನು ಮರೆಯಬೇಕಾಗಿಲ್ಲ ಮತ್ತು ನೀವು ಪರಿಸ್ಥಿತಿಯಿಂದ ಕಲಿಯಬೇಕು ಮತ್ತು ಅದಕ್ಕೆ ಹೊಂದಿಕೊಂಡು ಸಾಗಬೇಕು "ಎಂದು ಶಮಿ ತಮ್ಮ ಕಷ್ಟದ ದಿನಗಳನ್ನು ವಿವರಿಸಿದ್ದಾರೆ.