ಮುಂಬೈ:ವಿಶ್ವದಾದ್ಯಂತ ಕೊರೊನಾ ವೈರಸ್ ಹರುಡುತ್ತಿರುವುದರಿಂದ ಕ್ರೀಡಾಲೋಕ ಸ್ಥಗಿತಗೊಂಡಿದೆ. ಒಲಿಂಪಿಕ್ಸ್, ಐಪಿಎಲ್ ಸೇರಿದಂತೆ ಕೆಲವು ಕ್ರೀಡಾಕೂಟಗಳು ರದ್ದಾದರೆ, ಇನ್ನು ಕೆಲವು ಟೂರ್ನಿಗಳು ಮುಂದೂಡಲ್ಪಟ್ಟಿವೆ. ಹೀಗಿರುವಾಗ ಭಾರತ ತಂಡದ ಮಾಜಿ ನಾಯಕ ಹಾಗೂ ಕಾಮೆಂಟೇಟರ್ ಸುನಿಲ್ ಗವಾಸ್ಕರ್ ಇನ್ನೂ 4-5 ತಿಂಗಳು ಯಾವುದೇ ಲೈವ್ ಪಂದ್ಯಗಳನ್ನು ಮೈದಾನದಲ್ಲಾಗಲಿ ಅಥವಾ ಟಿವಿಯಲ್ಲಾಗಲಿ ನೋಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಸನ್ನಿವೇಶ ಗಮನಿಸಿದರೆ ಮುಂದಿನ 4-5 ತಿಂಗಳುಗಳ ಕಾಲ ಯಾವುದೇ ಕ್ರೀಡೆಯನ್ನು ಲೈವ್ನಲ್ಲಿ ಕಾಣಲು ಸಾಧ್ಯವಿಲ್ಲ ಎಂದು ನನಗನ್ನಿಸುತ್ತಿದೆ. ಇದು ಕ್ರೀಡಾಪಟುಗಳಿಗಲ್ಲದೆ ಕ್ರೀಡೆಯನ್ನು ಫಾಲೋ ಮಾಡುವವರಿಗೂ ಕೂಡ ಕಷ್ಟಕರವಾಗಲಿದೆ ಎಂದು ಗವಾಸ್ಕರ್ ಹೇಳಿದ್ದಾರೆ.
ಸಾವಿರಾರು ಮಂದಿ ವಿವಿಧ ಕ್ರೀಡೆಗಳನ್ನು ಫಾಲೋ ಮಾಡುವವರು ಕೇವಲ ಹಳೇಯ ಪಂದ್ಯಗಳನ್ನು ಮಾತ್ರ ಬೇಸರದ ಸಂದರ್ಭದಲ್ಲಿ ನೋಡುವಂತಾಗಿದೆ. ಇದರಿಂದ ಹಿಂದೆ ಏನು ನಡೆದಿದೆ ಎಂಬುದನ್ನು ನೋಡಬಹುದು. ಆದರೆ ನೀವು ನೇರ ಪ್ರಸಾರವನ್ನು ಅಥವಾ ಗ್ರೌಂಡ್ನಲ್ಲಿ ಲೈವ್ ನೋಡಬೇಕೆಂದರೆ ಸೆಪ್ಟೆಂಬರ್ವರೆಗೆ ಕಾಯಬೇಕಾಗಿದೆ. ಎಲ್ಲಾ ಕ್ರೀಡೆಗಳ ಮುಖ್ಯಸ್ಥರು ಈ ಸಂದರ್ಭದಲ್ಲಿ ಹಲವಾರು ಪ್ಲಾನ್ ಎ, ಬಿ, ಸಿಗಳ ಬಗ್ಗೆ ಆಲೋಚನೆ ಮಾಡಿಕೊಳ್ಳುತ್ತಿರಬಹುದೆಂದು ನಾನು ಭಾವಿಸಿದ್ದೇನೆ ಎಂದು ತಿಳಿಸಿದ್ದಾರೆ.
ಖಾಲಿ ಕ್ರೀಡಾಂಗಣದಲ್ಲಿ ಐಪಿಎಲ್ ನಡೆಸುವ ಬಗ್ಗೆ ಮಾತನಾಡಿದ ಗವಾಸ್ಕರ್, ಇದು ಯಾವಾಗಲೂ ಕೊನೆಯ ಅವಕಾಶವಾಗಿರುತ್ತದೆ. ಪಂದ್ಯವನ್ನು ನೋಡಲು ಯಾರೂ ಬರಲು ಸಾಧ್ಯವಿಲ್ಲ ಎನ್ನುವಂತಾದರೆ ಮಾತ್ರ ಜನಸಂದಣಿಯಿಲ್ಲದೆ ಆಡಬೇಕು.
ಪ್ರತಿಯೊಬ್ಬ ಆಟಗಾರನು ತಮ್ಮ ಕೌಶಲ್ಯ ಮತ್ತು ಮನೋಧರ್ಮವನ್ನು ಮೆಚ್ಚುವಂತಹ ಪ್ರೇಕ್ಷಕರ ಮಧ್ಯೆ ಆಡಬೇಕೆಂದು ಬಯಸುತ್ತಾನೆ. ಆದ್ದರಿಂದ ಪ್ರೇಕ್ಷಕರಿಲ್ಲದೆ ಆಡುವುದು ಸುಲಭವಾಗಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಗವಾಸ್ಕರ್ ಹೇಳಿದ್ದಾರೆ.