ಮೇಲ್ಬೋರ್ನ್:ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಅಭಿಮಾನಿಯಾಗಿರುವ ಆಸ್ಟ್ರೇಲಿಯಾ ಓಪನರ್ ಡೇವಿಡ್ ವಾರ್ನರ್ ಅವರ ದ್ವಿತೀಯ ಪುತ್ರಿ ಇಂಡಿ ರೇ, ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧದ ಟೆಸ್ಟ್ ಸರಣಿಯನ್ನು 2-1ರಿಂದ ಸೋತರೂ ಸಂಭ್ರಮ ವ್ಯಕ್ತಪಡಿಸಿದ್ದಾಳೆ. ಏಕೆಂದರೆ ವಾರ್ನರ್ ಪುತ್ರಿ ತಮ್ಮ ನೆಚ್ಚಿನ ಕ್ರಿಕೆಟಿಗ ಕೊಹ್ಲಿ ಜರ್ಸಿಯನ್ನು ಉಡುಗೊರೆಯಾಗಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.
ತಮ್ಮ ಮಗಳು ಕೊಹ್ಲಿಯ ಟೆಸ್ಟ್ ಜರ್ಸಿಯನ್ನು ತೊಟ್ಟು ಸಂಭ್ರಮಿಸುತ್ತಿರುವ ಚಿತ್ರವನ್ನು ವಾರ್ನರ್ ಶನಿವಾರ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
"ನಾವು ಸರಣಿಯನ್ನು ಸೋತಿದ್ದೇವೆ ಎಂದು ನನಗೆ ತಿಳಿದಿದೆ. ಆದರೆ ಇಲ್ಲಿ ಒಂದು ಹುಡುಗಿ ಮಾತ್ರ ತುಂಬಾ ಸಂತೋಷದಿಂದ ಇದ್ದಾಳೆ!. ನಿಮ್ಮ ಜರ್ಸಿ ನೀಡಿದ್ದಕ್ಕೆ ಧನ್ಯವಾದಗಳು ವಿರಾಟ್ ಕೊಹ್ಲಿ, ಇಂಡಿ ಇದನ್ನು ಸಂಪೂರ್ಣವಾಗಿ ಇಷ್ಟಪಟ್ಟಿದ್ದಾಳೆ. ಅವಳು ಕ್ಯಾಂಡಿ ಮತ್ತು ಆ್ಯರೋನ್ ಫಿಂಚ್ ಜೊತೆಗೆ ವಿರಾಟ್ ಕೊಹ್ಲಿಯನ್ನು ತುಂಬಾ ಪ್ರೀತಿಸುತ್ತಾಳೆ" ಎಂದು ವಾರ್ನರ್ ಬರೆದುಕೊಂಡಿದ್ದಾರೆ.
ಕಳೆದ ನವೆಂಬರ್ನಲ್ಲೂ ಇದೇ ವಿಚಾರವನ್ನು ವಾರ್ನರ್ ಪತ್ನಿ ಕ್ಯಾಂಡಿಸ್ ಕೂಡ ರೆಡಿಯೋ ಕಾರ್ಯಕ್ರಮದಲ್ಲಿ ಹೇಳಿದ್ದರು. "ನಾವು ಗಾರ್ಡನ್ನಲ್ಲಿ ಕೆಲವು ಸಂದರ್ಭದಲ್ಲಿ ಕ್ರಿಕೆಟ್ ಆಡುತ್ತೇವೆ. ನಮ್ಮ ಹುಡುಗಿಯರ ತಮಾಷೆಯ ವಿಷಯವೆಂದರೆ, ಅವರು ಕೆಲವೊಮ್ಮೆ ತಮ್ಮ ತಂದೆಯಂತಾಗಲು ಬಯಸುತ್ತಾರೆ, ಕೆಲವೊಮ್ಮೆ ಅವರು ಫಿಂಚಿ ಬಯಸುತ್ತಾರೆ (ಫಿಂಚ್). ಆದರೆ ನಮ್ಮ ಮಧ್ಯದ ಮಗಳು ಮಾತ್ರ ವಿರಾಟ್ ಕೊಹ್ಲಿಯಾಗಬೇಕೆನ್ನುತ್ತಾಳೆ. ನಾನು ತಮಾಷೆ ಮಾಡುತ್ತಿಲ್ಲ, ಅವಳ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಹ್ಲಿ!, ನಮ್ಮ ಮನೆಯಲ್ಲಿ ಅವಳು ರೆಬೆಲ್" ಎಂದು ತಿಳಿಸಿದ್ದಾರೆ.
ಇದನ್ನು ಓದಿ:ಐಸಿಸಿ ಟೆಸ್ಟ್ ಶ್ರೇಯಾಂಕ: 4ನೇ ಸ್ಥಾನ ಉಳಿಸಿಕೊಂಡ ಕೊಹ್ಲಿ, 6ಕ್ಕೇರಿದ ಪೂಜಾರ