ದುಬೈ:ಐಪಿಎಲ್ನಲ್ಲಿ ತಾನಾಡಿದ ಎಲ್ಲ ಆವೃತ್ತಿಗಳಲ್ಲೂ ಪ್ಲೇ ಆಫ್ ತಲುಪಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ 2020ರ ಐಪಿಎಲ್ನಲ್ಲಿ ಮೊದಲ ಬಾರಿಗೆ ಗುಂಪು ಹಂತದಿಂದ ನಿರ್ಗಮಿಸುತ್ತಿದೆ.
ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಎಂಎಸ್ ಧೋನಿ, ಈ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗುತ್ತಿರುವ ಕಾರಣ ಮುಂದಿನ ಆವೃತ್ತಿಯಲ್ಲಿ ಅವರು ಸಿಎಸ್‌ಕೆ ಭಾಗವಾಗುವ ಸಾಧ್ಯತೆ ಕಡಿಮೆ ಎಂದು ವದಂತಿಗಳಿದ್ದವು. ಆದರೆ, ಸಿಎಸ್‌ಕೆ ಫ್ರಾಂಚೈಸಿಯ ಸಿಇಒ ಕಾಶಿ ವಿಶ್ವನಾಥನ್ ಪ್ರತಿಕ್ರಿಯಿಸಿದ್ದು, ಧೋನಿ 2021ರ ಆವೃತ್ತಿಯಲ್ಲಿ ತಂಡ ಮುನ್ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
" ಧೋನಿ ಖಂಡಿತವಾಗಿ 2021ರ ಐಪಿಎಲ್ನಲ್ಲಿ ಸಿಎಸ್‌ಕೆ ಮುನ್ನಡೆಸಲಿದ್ದಾರೆ ಎಂಬ ನಂಬಿಕೆ ನನಗಿದೆ. ಟೂರ್ನಮೆಂಟ್ನಲ್ಲಿ ಅವರು ನಮಗೆ ಮೂರು ಪ್ರಶಸ್ತಿಗಳನ್ನು ಗೆದ್ದು ಕೊಟ್ಟಿದ್ದಾರೆ. ನಮ್ಮ ತಂಡ ಪ್ಲೇ ಆಫ್‌ಗೆ ಅರ್ಹತೆ ಪಡೆಯದ ಮೊದಲ ವರ್ಷ ಇದಾಗಿದೆ. ಆದರೆ, ಬೇರೆ ಯಾವ ತಂಡಗಳೂ ಈ ಸಾಧನೆ ಮಾಡಿಲ್ಲ. ಈ ವರ್ಷ ಕೆಟ್ಟ ವರ್ಷವಾಗಿದೆ. ಆದರೆ, ಅದಕ್ಕಾಗಿ ನಾಯಕನನ್ನು ಬದಲಾಯಿಸಬೇಕು ಎಂಬುದು ನಮ್ಮ ತಲೆಯಲ್ಲಿಲ್ಲ ಎಂದು " ವಿಶ್ವನಾಥನ್ ಖಾಸಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
" 2020ರ ಆವೃತ್ತಿಯಲ್ಲಿ ನಾವು ಈ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ. ನಾವು ಗೆಲ್ಲಬೇಕಾದ ಪಂದ್ಯಗಳನ್ನ ಕಳೆದುಕೊಂಡಿದ್ದೇವೆ. ಅದು ನಮ್ಮನ್ನು ಹಿಂದಕ್ಕೆ ತಳ್ಳಿದೆ. ತಂಡದಲ್ಲಿ ಕೋವಿಡ್ ಪ್ರಕರಣದ ಹೊಡೆತದ ಜೊತೆಗೆ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅಂತಹ ಅನುಭವಿಗಳ ಅನುಪಸ್ಥಿತಿ ತಂಡದ ಸಮತೋಲನವನ್ನು ಗೊಂದಲಗೊಳಿಸಿತು "ಎಂದಿದ್ದಾರೆ.