ಅಹ್ಮದಾಬಾದ್: ತವರಿನ ತಂಡಕ್ಕೆ ಹೊಂದಿಕೊಳ್ಳುವ ಪಿಚ್ಗಳನ್ನು ಸಿದ್ಧಪಡಿಸಿಕೊಳ್ಳುವುದು ಕ್ರಿಕೆಟ್ ರಾಷ್ಟ್ರಗಳಲ್ಲಿ ಕಂಡುಬರುವ ಹೊಸ ವಿದ್ಯಮಾನವೇನಲ್ಲ ಎಂದು 2ನೇ ಟೆಸ್ಟ್ ವೇಳೆ ಚೆಪಾಕ್ ಪಿಚ್ ಬಗ್ಗೆ ಕೇಳಿಬಂದ ಟೀಕೆಗೆ ಭಾರತ ತಂಡದ ಸೀಮಿತ ಓವರ್ಗಳ ಉಪನಾಯಕ ರೋಹಿತ್ ಶರ್ಮಾ ತಿರುಗೇಟು ನೀಡಿದ್ದಾರೆ.
2ನೇ ಟೆಸ್ಟ್ ಪಂದ್ಯದ ವೇಳೆ ಚೆಪಾಕ್ನಲ್ಲಿ ಮೊದಲ ದಿನದಿಂದಲೇ ಸ್ಪಿನ್ಗೆ ನೆರವಾಗುವಂಥ ಪಿಚ್ ತಯಾರಿಸಿದ್ದಕ್ಕೆ ಇಂಗ್ಲೆಂಡ್ ಮಾಜಿ ಕ್ಯಾಪ್ಟನ್ ಮೈಕಲ್ ವಾನ್, ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಮಾರ್ಕ್ ವಾ ಟೀಕಿಸಿದ್ದರು.
ಆದರೆ ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರೋಹಿತ್ ಶರ್ಮಾ, ಪಿಚ್ ಎರಡು ತಂಡಗಳಿಗೂ ಒಂದೇ ಆಗಿತ್ತು. ಎಲ್ಲಾ ಸಮಯದಲ್ಲೂ ಇದೊಂದು ವಿಷಯ ಏಕೆ ಸದ್ದು ಮಾಡುತ್ತದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಎರಡೂ ತಂಡಗಳೂ ಒಂದೇ ತರಹದ ಪಿಚ್ನಲ್ಲಿ ಆಡಿವೆ. ಕೆಲವು ಜನರು ಪಿಚ್ ಹೀಗಿರಬಾರದು ಎಂದು ಹೇಳುತ್ತಾರೆ. ಆದರೆ ಭಾರತದಲ್ಲಿ ಕೆಲವು ವರ್ಷಗಳಿಂದ ಇದೇ ರೀತಿಯ ಪಿಚ್ಗಳನ್ನು ತಯಾರಿಸಲಾಗುತ್ತಿದೆ ಎಂದು ವರ್ಚುವಲ್ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನನ್ನ ಪ್ರಕಾರ ಇದರಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ಪ್ರತಿಯೊಂದು ತಂಡವೂ ಅದರ ತವರಿನ ಲಾಭವನ್ನು ಪಡೆದುಕೊಳ್ಳಲು ಬಯಸುತ್ತದೆ ಎಂದು ಹಿಟ್ಮ್ಯಾನ್ ಸ್ಪಷ್ಟಪಡಿಸಿದ್ದಾರೆ.