ಕೊಚ್ಚಿ: ಮ್ಯಾಚ್ ಫಿಕ್ಸಿಂಗ್ನ ನಿಷೇಧ ಶಿಕ್ಷೆಯಿಂದ ಹೊರಬಂದಿರುವ ಭಾರತ ತಂಡದ ಮಾಜಿ ವೇಗಿ ಶ್ರೀಶಾಂತ್ ದೇಶಿ ಕ್ರಿಕೆಟ್ಗೆ ಮರಳಿದ್ದಾರೆ. ಜನವರಿ 10ರಿಂದ ಆರಂಭವಾಗಲಿರುವ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕೇರಳ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡುವಾಗ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸಿಲುಕಿ ಆಜೀವ ನಿಷೇಧಕ್ಕೊಳಗಾಗಿದ್ದರು. ನಂತರ ಅವರ ಶಿಕ್ಷೆಯನ್ನು 7 ವರ್ಷಕ್ಕೆ ಇಳಿಸಲಾಗಿತ್ತು. ಕಳೆದ ಸೆಪ್ಟೆಂಬರ್ನಲ್ಲಿ ಅವರ ನಿಷೇಧ ಅಂತ್ಯಗೊಂಡಿದ್ದು, ಇದೀಗ ಕ್ರಿಕೆಟ್ನಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸಲಿದ್ದಾರೆ.
"ತನ್ನನ್ನು ತಾನೆ ಪುನರ್ ನಿರ್ಮಿಸಿಕೊಳ್ಳುವ ಮನನೊಂದ ಮನುಷ್ಯನಿಗಿಂತ ಬಲಶಾಲಿ ಬೇರೇನೂ ಇರುವುದಿಲ್ಲ... ನನಗೆ ಕಠಿಣ ಸಂದರ್ಭದಲ್ಲಿ ಬೆಂಬಲ ಮತ್ತು ಪ್ರೀತಿ ತೋರಿದ ಎಲ್ಲರಿಗೂ ಧನ್ಯವಾದಗಳು." ಎಂದು ಶ್ರೀಶಾಂತ್ ಟ್ವೀಟ್ ಮಾಡಿದ್ದಾರೆ.