ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಇಂದು ಪ್ರೇಮಿಗಳದ್ದೇ ಸದ್ದು. ವ್ಯಾಲೆಂಟೈನ್ಸ್ ಡೇ ದಿನವಾದ ಇಂದು ತಮ್ಮ ಪ್ರೀತಿಯ ಬಗ್ಗೆ ಬರೆದುಕೊಳ್ಳುತ್ತಿದ್ದು, ಪ್ರೀತಿ ಪಾತ್ರರಿಗೆ ಶುಭಾಶಯ ತಿಳಿಸುತ್ತಿದ್ದಾರೆ.
ಭಾರತದ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಕೂಡ ಪ್ರೇಮಿಗಳ ದಿನವಾದ ಇಂದು ತಮ್ಮ ಮೊದಲ ಪ್ರೀತಿಯನ್ನ ರಿವೀಲ್ ಮಾಡಿದ್ದಾರೆ. ನೆಟ್ನಲ್ಲಿ ಕ್ರಿಕೆಟ್ ಆಡುತ್ತಿರುವ ವಿಡಿಯೋವನ್ನ ಪೋಸ್ಟ್ ಮಾಡಿರುವ ಸಚಿನ್ ತೆಂಡೂಲ್ಕರ್ 'ನನ್ನ ಮೊದಲ ಪ್ರೀತಿ' ಎಂದು ಬರೆದುಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ ಬಳಿಕ ಮೊನ್ನೆಯಷ್ಟೆ ಮತ್ತೆ ಮೈದಾನಕ್ಕಿಳಿದಿದ್ದರು ಮಾಸ್ಟರ್ ಬ್ಲಾಸ್ಟರ್. ಆಸ್ಟ್ರೇಲಿಯಾದಲ್ಲಿ ನಡೆದ ಬುಷ್ಫೈರ್ ಕ್ರಿಕೆಟ್ ಬ್ಯಾಷ್ನಲ್ಲಿ ಪಾಂಟಿಂಗ್ ತಂಡದ ಕೋಚ್ ಆಗಿದ್ದ ಸಚಿನ್, ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟರ್ ಎಲಿಸ್ ಪೆರ್ರಿ ಅವರ ಮನವಿಗೆ ಸ್ಪಂದಿಸಿ ಒಂದು ಓವರ್ ಬ್ಯಾಟಿಂಗ್ ಮಾಡುವ ಮೂಲಕ ಐದೂವರೆ ವರ್ಷಗಳ ಬಳಿಕ ಮತ್ತೆ ಕ್ರಿಕೆಟ್ ಆಡಿದ್ದರು.
ಭಾರತದ ಪರ 463 ಏಕದಿನ ಪಂದ್ಯಗಳನ್ನ ಆಡಿರುವ ಸಚಿನ್ ತೆಂಡೂಲ್ಕರ್ 18,426ರನ್ ಗಳಿಸಿದ್ದು, 200 ಟೆಸ್ಟ್ ಪಂದ್ಯಗಳಿಂದ 15,921 ರನ್ ಗಳಿಸಿದ್ದಾರೆ.