ದುಬೈ:ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಗರ್ಭವತಿಯಾಗಿರುವ ವಿಷಯವನ್ನ ಕಳೆದ ಕೆಲ ದಿನಗಳ ಹಿಂದೆ ಸ್ಟಾರ್ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ಮೊದಲ ಬಾರಿಗೆ ವಿರಾಟ್ ಈ ವಿಷಯವಾಗಿ ಮಾತನಾಡಿದ್ದಾರೆ.
ತಂದೆಯಾಗುವ ಖುಷಿ ಹಂಚಿಕೊಂಡ ವಿರಾಟ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗಿಯಾಗಲು ಸದ್ಯ ದುಬೈನಲ್ಲಿರುವ ವಿರಾಟ್ ಕೊಹ್ಲಿ, ಹೌದು, ಅದೊಂದು ಅದ್ಭುತ ಅನುಭವ. ನಾನು ಹೇಳಬಹುದು ಅಷ್ಟೆ. ಆದರೆ ಅದರ ಬಗ್ಗೆ ವಿವರಣೆ ನೀಡುವುದು ತುಂಬಾ ಕಷ್ಟ. ನಿಜವಾಗಲೂ ಇದೊಂದು ಭಾವನಾತ್ಮಕ ಹಾಗೂ ಸಂತೋಷಕರ ವಿಚಾರ ಎಂದಿದ್ದಾರೆ.
ಡಿಸೆಂಬರ್ 11,2017 ರಂದು ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಈ ಜೋಡಿ, ಟ್ವೀಟರ್ನಲ್ಲಿ ಕಳೆದ ಕೆಲ ದಿನಗಳ ಹಿಂದೆ ಫೋಟೋ ಶೇರ್ ಮಾಡಿ 2021ರ ಜನವರಿಯಲ್ಲಿ ನಾವು ಮೂವರಾಗಲಿದ್ದೇವೆ ಎಂದು ಹೇಳಿದ್ದರು. ಇದೇ ವೇಳೆ ಕಳೆದ ಆರು ತಿಂಗಳಿಂದ ಕ್ರಿಕೆಟ್ನಿಂದ ದೂರ ಉಳಿದಿದ್ದ ವಿಚಾರವಾಗಿ ಮಾತನಾಡಿರುವ ಕೊಹ್ಲಿ, ಆರಂಭದಲ್ಲಿ ಅಭ್ಯಾಸಕ್ಕೆ ಹೋಗುವಾಗ ನನಗೆ ಆತಂಕವಾಯಿತು. ಕಳೆದ 9-10 ವರ್ಷಗಳಲ್ಲಿ ಇಷ್ಟೊಂದು ದೀರ್ಘಾವಧಿ ವಿಶ್ರಾಂತಿ ಪಡೆದುಕೊಂಡಿರುವುದು ಇದೇ ಮೊದಲು. ಎಲ್ಲ ಸಮಯದಲ್ಲೂ ಆಟ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಕ್ರೀಡಾಂಗಣದಲ್ಲಿ ಯಾವುದೇ ಅಭಿಮಾನಿಗಳಿಲ್ಲದೇ ಕ್ರಿಕೆಟ್ ಆಡುವುದು ಖಂಡಿತ, ಹೊಸ ಅನುಭವ. 2010ರಲ್ಲಿ ರಣಜಿ ಟ್ರೋಫಿ ವೇಳೆ ಇಂತಹ ಅನುಭವ ನನನಗೆ ಆಗಿದೆ. ಆದರೆ 10 ವರ್ಷದಿಂದ ಪ್ರತಿ ಪಂದ್ಯದಲ್ಲೂ ಅಭಿಮಾನಿಗಳು ನಮ್ಮೊಂದಿಗೆ ಇದ್ದರು ಎಂದು ತಿಳಿಸಿದ್ದಾರೆ. ದುಬೈನಲ್ಲಿ ಸೆಪ್ಟೆಂಬರ್ 19ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ಈಗಾಗಲೇ ಎಲ್ಲ ಪ್ರಾಂಚೈಸಿ ಪ್ಲೇಯರ್ಸ್ ಅರಬ್ ದೇಶದಲ್ಲಿ ಅಭ್ಯಾಸದಲ್ಲಿ ಭಾಗಿಯಾಗಿದ್ದಾರೆ.