ನವದೆಹಲಿ :ಸಂಕಷ್ಟದಲ್ಲಿರುವ ಬಡವರು, ನಿರಾಶ್ರಿತರು, ಕಾರ್ಮಿಕರ ನೆರವಿಗೆ ಧಾವಿಸಿರುವ ಭಾರತದ ಕ್ರಿಕೆಟಿಗ ಮೊಹಮ್ಮದ್ ಶಮಿ ಆಹಾರ ಮತ್ತು ಮಾಸ್ಕ್ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಉತ್ತರಪ್ರದೇಶದ ಬಿಜ್ನೋರ್ ನಗರದ ಸಮೀಪದ ಸಹಸ್ಪುರದ ತಮ್ಮ ಮನೆಯ ಬಳಿ ವಲಸಿಗರಿಗಾಗಿ ಮೊಹಮ್ಮದ್ ಶಮಿ ಆಹಾರ ವಿತರಣಾ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಕಾರ್ಮಿಕರಿಗೆ, ನಿರಾಶ್ರಿತರಿಗೆ, ಬಡವರಿಗೆ ಬೇಕಾದ ಅಗತ್ಯದ ವಸ್ತುಗಳನ್ನು ವಿತರಣೆ ಮಾಡುತ್ತಿದ್ದಾರೆ.
ಆಹಾರ ಪ್ಯಾಕೇಟ್ಗಳು ಮತ್ತು ಮಾಸ್ಕ್ ನೀಡುವ ಮೂಲಕ ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಅಲ್ಲದೆ ಜನರನ್ನು ಮನೆ ತಲುಪಿಸಲು ಕೂಡ ಶಮಿ ಸಹಾಯ ಮಾಡುತ್ತಿದ್ದಾರೆ. ಶಮಿಯ ಈ ಮಾನವೀಯತೆ ಕೆಲಸವನ್ನು ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಬಿಸಿಸಿಐ ಹಂಚಿಕೊಂಡಿರುವ ಟ್ವೀಟ್ನಲ್ಲಿ 42 ಸೆಕೆಂಡ್ಗಳ ವಿಡಿಯೋ ಇದೆ.
ಅಲ್ಲದೆ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರೂ ಇದೇ ರೀತಿ ಸೇವೆ ಮಾಡುತ್ತಿದ್ದಾರೆ. ಆಹಾರ ಪ್ಯಾಕೇಟ್ಗಳನ್ನು ಸಂಕಷ್ಟದಲ್ಲಿರುವವರಿಗೆ ವಿತರಿಸುತ್ತಿದ್ದಾರೆ. ದೇಣಿಗೆ ನೀಡುವಂತೆ ಅವರ ಅನುಯಾಯಿಗಳಿಗೆ ಮನವಿ ಮಾಡಿದ್ದರು.