ಪುಣೆ: ಭಾರತದ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಆಕರ್ಷಕ 95 ರನ್ಗಳಿಸಿ ಬಲಿಷ್ಠ ಭಾರತದೆದುರು ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ತೋರಿದ ಸ್ಯಾಮ್ ಕರ್ರನ್ರ ಹೋರಾಟದ ವಿಧಾನವನ್ನು ಮೆಚ್ಚಿಕೊಂಡಿರುವ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್, ಕರ್ರನ್ ಧೋನಿಯ ನೆರಳನ್ನು ಹೊಂದಿದ್ದಾರೆ ಎಂದು ಭಾನುವಾರ ಪಂದ್ಯದ ನಂತರ ತಿಳಿಸಿದ್ದಾರೆ.
ಭಾನುವಾರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಆಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ನೀಡಿದ್ದ 330ರನ್ಗಳ ಗುರಿಯನ್ನು ಬೆನ್ನಟ್ಟಿದ್ದ ಇಂಗ್ಲೆಂಡ್ ತಂಡ ಸುಲಭವಾಗಿ ಸೋಲುವ ಹಂತ ತಲುಪಿತ್ತು. ಆದರೆ ಕೊನೆಯ ಬಾಲಂಗೋಸಿಗಳ ನೆರವಿನಿಂದ ಅದ್ಭುತ ಆಟ ಪ್ರದರ್ಶನ ತೋರಿದ 22 ವರ್ಷ ಯುವ ಆಟಗಾರ ಸ್ಯಾಮ್ ಕರ್ರನ್ 83 ಎಸೆತಗಳಲ್ಲಿ ಅಜೇಯ 95 ರನ್ಗಳಿಸಿದರು. ಆದರೆ ತಂಡವನ್ನು ಗೆಲುವಿನ ಗಡಿ ದಾಟಿಸಲು ವಿಫಲರಾದರು. ಇಂಗ್ಲೆಂಡ್ 322 ರನ್ಗಳಿಸಿ 7ರನ್ಗಳಿಂದ ಸೋಲುಂಡಿತು. ಆದರೆ ಇವರ ಆಟ ಕ್ರಿಕೆಟ್ ತಜ್ಞರ ಮತ್ತು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.