ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಲೊಯರ್ ಬ್ಯಾಕ್ ಸರ್ಜರಿ ಬಳಿಕ ಮೊದಲ ಬಾರಿಗೆ ಮೈದಾನಕ್ಕಿಳಿದು ಅಭ್ಯಾಸ ಆರಂಭಿಸಿದ್ದಾರೆ.
ಭಾರತ ತಂಡಕ್ಕೆ ದೀರ್ಘ ಸಮಯದ ನಂತರ ಸಿಕ್ಕಿರುವ ಆಲರೌಂಡರ್ ಪಾಂಡ್ಯ ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ವೇಳೆ ಬೆನ್ನು ನೋವಿಗೆ ತುತ್ತಾಗಿ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ನಂತರ ಇಂಗ್ಲೆಂಡ್ನಲ್ಲಿ ಬೆನ್ನು ನೋವಿಗೆ ಚಿಕಿತ್ಸೆ ಪಡೆದು ಇದೀಗ ಮೈದಾನಕ್ಕೆ ಇಳಿದು ವರ್ಕೌಟ್ ಆರಂಭಿಸಿದ್ದಾರೆ.
ಅಕ್ಟೋಬರ್ 5 ರಂದು ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಪಾಂಡ್ಯ ಒಂದೂವರೆ ತಿಂಗಳ ಬಳಿಕ ಮೈದಾನ ಹಾಗೂ ಜಿಮ್ನಲ್ಲಿ ಬೆವರಿಳಿಸುತ್ತಿದ್ದಾರೆ. ತಮ್ಮ ಟ್ವಿಟರ್ನಲ್ಲಿ. " ದೀರ್ಘಕಾಲದ ನಂತರ ಹೊರಗೆ ಬಂದಿದ್ದೇನೆ, ಮರಳಿ ಮೈದಾನಕ್ಕಿಳಿಯುವುದಕ್ಕಿಂತ ಖುಷಿ ಬೇರೊಂದಿಲ್ಲ" ಎಂದು ತಾವು ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
2020ಕ್ಕೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ಗೆ ಭಾರತ ತಂಡದ ಅವಿಭಾಜ್ಯ ಅಂಗವಾಗಲಿರುವ ಹಾರ್ದಿಕ್ ಪಾಂಡ್ಯಗೆ ಆದಷ್ಟು ಬೇಗ ತಂಡಕ್ಕೆ ಮರಳಿ ಎಂದು ಅಭಿಮಾನಿಗಳು ಶುಭಕೋರಿದ್ದಾರೆ. 25 ವರ್ಷದ ಪಾಂಡ್ಯ 11 ಟೆಸ್ಟ್ ಪಂದ್ಯಗಳಿಂದ 11ವಿಕೆಟ್, 532 ರನ್, 54 ಏಕದಿನ ಪಂದ್ಯಗಳಿಂದ 937 ರನ್, 54 ವಿಕೆಟ್ ಹಾಗೂ 40 ಟಿ20 ಪಂದ್ಯಗಳಿಂದ 310 ರನ್ ಹಾಗೂ 38 ವಿಕೆಟ್ ಪಡೆದುಕೊಂಡಿದ್ದಾರೆ.