ಸೌತಾಂಪ್ಟನ್:ಕಳೆದ ಮೂರು ತಿಂಗಳಿನಿಂದ ಕೊರೊನಾ ಸಾಂಕ್ರಾಮಿಕ ರೋಗದ ಭೀತಿಯಿಂದ ಸ್ಥಗಿತಗೊಂಡಿದ್ದ ಕ್ರಿಕೆಟ್ ಪುನರಾರಂಭಗೊಳ್ಳುತ್ತಿದ್ದು, ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ.
ಬುಧವಾರ ಸೌತಾಂಪ್ಟನ್ನ ರೋಸ್ ಬೌಲ್ ಸ್ಟೇಡಿಯಂನಲ್ಲಿ ಬಯೋ ಸೆಕ್ಯೂರ್ ವಾತಾವರಣದಲ್ಲಿ ಮೊದಲ ಟೆಸ್ಟ್ ಆರಂಭಗೊಳ್ಳುತ್ತಿದೆ. ಇಂಗ್ಲೆಂಡ್ಗೆ ಬಂದು ಕ್ವಾರಂಟೈನ್ ಮುಗಿಸಿ 15 ದಿನಗಳ ಅಭ್ಯಾಸವನ್ನು ಮಾಡಿರುವ ವಿಂಡೀಸ್ ತಂಡ ಇಂಗ್ಲೆಂಡ್ಗೆ ಪೈಪೋಟಿ ನೀಡಲು ಸಜ್ಜಾಗಿದೆ.
ಇತ್ತ ಇಂಗ್ಲೆಂಡ್ ಕಳೆದ ತಿಂಗಳೇ ತರಬೇತಿ ಕ್ರಿಕೆಟ್ಗೆ ಮರಳಲು ಕಾತುರದಿಂದ ಕಾಯುತ್ತಿದೆ. ಕಾಯಂ ನಾಯಕ ಜೋ ರೂಟ್ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದರಿಂದ ಈ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಈ ಸಂದರ್ಭದಲ್ಲಿ ಉಪ ನಾಯಕನಾಗಿದ್ದ ಬೆನ್ ಸ್ಟೋಕ್ಸ್ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಸೌತಾಂಪ್ಟನ್‌ನಲ್ಲಿ ಮೊದಲ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಆದರೆ ಸಂಪೂರ್ಣ ಆಟಕ್ಕೆ ಮಳೆ ಅಡಚಣೆಯಾಗುವುದಿಲ್ಲ ಎನ್ನಲಾಗಿದೆ. ಈ ಹಿಂದಿನ ಅಂಕಿ-ಅಂಶಗಳನ್ನು ಗಮನಿಸುವುದಾದರೆ ಟಾಸ್ ಗೆದ್ದ ತಂಡ ಇಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯೇ ಹೆಚ್ಚಿದೆ.
ಇನ್ನು 1988ರಿಂದ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲದ ವೆಸ್ಟ್ ಇಂಡೀಸ್ ತಂಡ ಇತಿಹಾಸ ನಿರ್ಮಿಸುವ ಇರಾದೆಯಲ್ಲಿದೆ. ಕಳೆದ ತವರಿನ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು 2-1ರಲ್ಲಿ ಬಗ್ಗಬಡಿದಿದ್ದ ವೆಸ್ಟ್ ಇಂಡೀಸ್ ಅದೇ ಉತ್ಸಾಹದಲ್ಲಿ ಕಣಕ್ಕಿಳಿಯುತ್ತಿದೆ.