ನವದೆಹಲಿ :ರಾಷ್ಟ್ರೀಯ ಡೋಪಿಂಗ್ ಪರೀಕ್ಷಾ ಪ್ರಯೋಗಾಲಯದ (ಎನ್‌ಡಿಟಿಎಲ್) ಮಾನ್ಯತೆಯನ್ನು ಇನ್ನು 6 ತಿಂಗಳ ಕಾಲ ಸ್ಥಗಿತಗೊಳಿಸಿರುವುದಾಗಿ ವಾಡಾ (ವರ್ಲ್ಡ್ ಆ್ಯಂಟಿ ಡೋಪಿಂಗ್ ಏಜೆನ್ಸಿ) ಪ್ರಕಟಿಸಿದೆ.
ಈ ಅಮಾನತು ಜುಲೈ 17ರಿಂದ ಪ್ರಾರಂಭವಾಗಲಿದ್ದು, ಮೂತ್ರ ಮತ್ತು ರಕ್ತದ ಮಾದರಿಗಳು ವಿಶ್ಲೇಷಣೆ ಸೇರಿದಂತೆ ಯಾವುದೇ ಡೂಪಿಂಗ್ ವಿರೋಧಿ ಚಟುವಟಿಕೆಗಳನ್ನು ಎನ್‌ಡಿಟಿಎಲ್ ನಡೆಸುವಂತಿಲ್ಲ.
'ಅಮಾನತುಗೊಳಿಸಿರುವ ಅವಧಿಯಲ್ಲಿ ಪ್ರಯೋಗಾಲಯವು ಅವಶ್ಯಕತೆಗಳನ್ನು ಪೂರೈಸುವ ಲ್ಯಾಬ್‌ಇಜಿ (LabEG)ಯನ್ನು ತೃಪ್ತಿಪಡಿಸಿದ್ರೆ, ಆರು ತಿಂಗಳ ಅಮಾನತು ಅವಧಿ ಮುಗಿಯುವ ಮೊದಲೇ ಪುನರಾರಂಭಕ್ಕೆ ಅರ್ಜಿ ಸಲ್ಲಿಸಬಹುದು' ಎಂದು ವಾಡಾ ಮಂಗಳವಾರ ತಿಳಿಸಿದೆ.
ಒಂದು ವೇಳೆ ಆರು ತಿಂಗಳ ಅಮಾನತು ಅವಧಿಯ ಅಂತ್ಯದ ವೇಳೆಗೆ ಪ್ರಯೋಗಾಲಯವು ಗುಣಮಟ್ವ ಸಾಬೀತುಪಡಿಸದಿದ್ರೆ, ವಾಡಾ ಮತ್ತೆ ಪ್ರಯೋಗಾಲಯದ ಮಾನ್ಯತೆಯನ್ನು ಹೆಚ್ಚುವರಿ ಆರು ತಿಂಗಳವರೆಗೆ ಅಮಾನತು ಮಾಡಲಿದೆ. ಅಮಾನತಿನ ಸಮಯದಲ್ಲಿ ಭಾರತದಿಂದ ಹೊರಗೆ ವಾಡಾದಿಂದ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿಯೇ ಪರೀಕ್ಷೆ ನಡೆಸಬೇಕಾಗುತ್ತದೆ.
ಕಳೆದ ವರ್ಷ ಅಗಸ್ಟ್ನಲ್ಲಿ ವಾಡಾ ಎನ್ಡಿಸಿಎಲ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಯೋಗಾಲಯ ಅಂತಾರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸುತ್ತಿಲ್ಲ ಎಂದು ವಾಡಾ ಪ್ರಯೋಗಾಲಯದ ಮಾನ್ಯತೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿತ್ತು.