ನವದೆಹಲಿ:ಸಿಯಾಚಿನ್ನಂತಹ ಪ್ರದೇಶದಲ್ಲಿ ನಿಂತು ಕಾರ್ಯನಿರ್ವಹಿಸುವ ಯೋಧರ ಗುಂಪೊಂದು ಮಂಜುಗಡ್ಡೆಯನ್ನೇ ಕೇಕ್ ಎಂದು ಕತ್ತರಿಸಿ ಬರ್ತಡೇ ಆಚರಿಸಿಕೊಂಡಿರುವ ವಿಡಿಯೋವನ್ನು ಭಾರತೀಯ ಮಾಜಿ ಕ್ರಿಕೆಟಿಗ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ದೇಶದ ಜನತೆಯ ರಕ್ಷಣೆಯ ಹೊಣೆ ಹೊತ್ತಿಕೊಂಡಿರುವ ಸೈನಿಕರು ಚಳಿ, ಬಿಸಿಲು ಮಳೆಯನ್ನದೇ ಸದಾ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಅದರಲ್ಲೂ ಸಿಯಾಚಿನ್ ನಂತಹ ಪ್ರದೇಶದಲ್ಲಿ ನಿಂತು ಕಾರ್ಯನಿರ್ವಹಿಸುವುದನ್ನ ನೆನಪಿಸಿಕೊಂಡರೆ ಮೈ ಜುಮ್ ಎನ್ನುತ್ತದೆ.
ಆದರೆ, ಇದೆಲ್ಲವನ್ನು ಲೆಕ್ಕಿಸದೇ ಯೋಧರ ಗುಂಪೊಂದು ತಮ್ಮ ಸ್ನೇಹಿತರ ಹುಟ್ಟಿದ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಮಂಜುಗಡ್ಡೆಯನ್ನೇ ಕೇಕ್ನಂತೆ ನಿರ್ಮಿಸಿ ಅದನ್ನೆ ಕತ್ತರಿಸಿ ತಿನ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸೆಹ್ವಾಗ್, " ಯೋಧನೊಬ್ಬ ಬರ್ತಡೇ ಆಚರಿಸಿಕೊಂಡಿದ್ದಾರೆ. ಚೀಸ್ ಕೇಕ್ ಮರೆತು, ಸುಂದರವಾದ ಮಂಜುಗಡ್ಡೆಯ ಕೇಕ್ ಬಳಸಿದ್ದಾರೆ. ಅದನ್ನು ಯೋಧ ಮಾತ್ರ ಬಲ್ಲ. ಯೋಧರ ತ್ಯಾಗ ಮತ್ತು ಸ್ಥಿತಿಯನ್ನು ಹೇಳಲು ಪದಗಳು ಸಾಲದು" ಎಂದು ಬರೆದು ಟ್ವೀಟ್ ಮಾಡಿದ್ದಾರೆ.