ನವದೆಹಲಿ: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾಗಿದ್ದ ಸೈನಿಕರ ಮಕ್ಕಳು ಸೆಹ್ವಾಗ್ ಇಟರ್ನ್ಯಾಷನಲ್ ಸ್ಕೂಲ್ನಲ್ಲಿ ಕ್ರಿಕೆಟ್ ಆಟ ಕಲಿಯುತ್ತಿದ್ದಾರೆ.
ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧ ರಾಮ್ ವಕೀಲ್ ಪುತ್ರ ಅರ್ಪಿತ್ ಸಿಂಗ್ ಮತ್ತು ಯೋಧ ವಿಜಯ್ ಸೊರೆಂಗ್ ಪುತ್ರ ರಾಹುಲ್ ಸೊರೆಂಗ್ ಎಂಬ ಇಬ್ಬರು ಮಕ್ಕಳು ಸೆಹ್ವಾಗ್ ಶಾಲೆಯಲ್ಲಿ ಓದುತಿದ್ದು, ಕ್ರಿಕೆಟ್ ತರಬೇತಿ ಕೂಡ ನೀಡಲಾಗುತ್ತಿದೆ.
ಈ ಇಬ್ಬರಲ್ಲಿ ಅರ್ಪಿತ್ ಸಿಂಗ್ ಬ್ಯಾಟಿಂಗ್ ತರಬೇತಿ ಪಡೆಯುತಿದ್ದರೆ, ರಾಹುಲ್ ಸೊರೆಂಗ್ ಬೌಲಿಂಗ್ ತರಬೇತಿ ಪಡೆಯುತ್ತಿದ್ದಾರೆ. ಈ ಬಗ್ಗೆ ಸ್ವತಃ ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದು, ನಮ್ಮ ದೇಶದ ಹೀರೋಗಳ ಮಕ್ಕಳು ನಮ್ಮ ಶಾಲೆಯಲ್ಲಿ ಓದುತ್ತಿರುವುದು ಹೆಮ್ಮೆಯ ವಿಚಾರ. ಅವರ ಜೀವನಕ್ಕೆ ನಾವೂ ಕೂಡ ಕೊಡುಗೆ ನೀಡುತ್ತಿರುವುದು ನಮ್ಮ ಅದೃಷ್ಟ ಎಂದಿದ್ದಾರೆ.
ಸೆಹ್ವಾಗ್ ಕಾರ್ಯವನ್ನ ಮೆಚ್ಚಿಕೊಂಡಿರುವ ಅಭಿಮಾನಿಗಳು ಟ್ವಿಟ್ಟರ್ ಮೂಲಕ ಅಭಿನಂದನೆ ತಿಳಿಸುತ್ತಿದ್ದಾರೆ. ಸಮಾಜಕ್ಕೆ ನಿಮ್ಮ ಕೈಲಾದಷ್ಟು ಸಹಾಯ ಮಾಡುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ. ಇಂತಾ ಮಕ್ಕಳ ಜವಾಬ್ದಾರಿಯನ್ನ ವಹಿಸಿಕೊಂಡಿರುವ ನೀವೂ ಕೂಡ ಒಬ್ಬ ಹೀರೋ ಎಂದು ಅಭಿನಂದಿಸಿದ್ದಾರೆ.
ಇದೇ ವರ್ಷ ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಜೈಷ್ ಉಗ್ರ ನಡೆಸಿದ್ದ ದಾಳಿಯಲ್ಲಿ 40 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು.