ಕೋಲ್ಕತ್ತಾ: ಅಕ್ಟೋಬರ್ 23 ಕ್ಕೆ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೇರುತ್ತಿರುವ ಸೌರವ್ ಗಂಗೂಲಿ ಅವರು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿಯ ಟೂರ್ನಿಗಳನ್ನು ಗೆಲ್ಲುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಭಾರತ ಸೀಮಿತ ಓವರ್ ಕ್ರಿಕೆಟ್ನಲ್ಲಿ ವಿಶ್ವದ ಬಲಿಷ್ಠ ತಂಡ. ಆದ್ರೆ 2013 ರ ಬಳಿಕ ಯಾವುದೇ ಐಸಿಸಿ ಟೂರ್ನಾಮೆಂಟ್ ಗೆಲ್ಲಲು ಸಾಧ್ಯವಾಗಿಲ್ಲ. ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಗಂಗೂಲಿ, "ಭಾರತ ಉತ್ತಮ ತಂಡ, ಆದರೆ ನಾಯಕತ್ವದಲ್ಲಿ ಸಮಸ್ಯೆಯಿದೆ. ಕಳೆದ ಪ್ರಮುಖ ಟೂರ್ನಾಮೆಂಟ್ನಲ್ಲಿ ಭಾರತಕ್ಕೆ ಒಂದನ್ನೂ ಸಹ ಗೆಲ್ಲಲಾಗಿಲ್ಲ. ಈ ಬಗ್ಗೆ ಕೊಹ್ಲಿ ಚಿಂತಿಸುವ ಅಗತ್ಯವಿದೆ. ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ತೋರುತ್ತಿದೆ. ಆದರೆ ಸೆಮಿಫೈನಲ್ ಹಾಗೂ ಫೈನಲ್ನಲ್ಲಿ ಎಡವುತ್ತಿದೆ. ಇದರ ಬಗ್ಗೆ ನಾಯಕ ಕೊಹ್ಲಿ ಖಂಡಿತ ಆಲೋಚನೆ ಮಾಡಬೇಕು ಎನ್ನುವುದು ನನ್ನ ಅಭಿಪ್ರಾಯ" ಎಂದು ತಿಳಿಸಿದ್ದಾರೆ.
ಕೊಹ್ಲಿ ಹಾಗೂ ತಂಡ ಐಸಿಸಿ ಟೂರ್ನಿಗಳನ್ನು ಗೆಲ್ಲಬೇಕೆಂಬುದು ನನ್ನ ಏಕೈಕ ಆಲೋಚನೆ. ಅವರು ಎಲ್ಲಾ ಸಮಯದಲ್ಲಿ ಚಾಂಪಿಯನ್ ಆಗಲು ಸಾಧ್ಯವಿಲ್ಲ. ಆದರೆ ಸತತ 7 ಐಸಿಸಿ ಟೂರ್ನಾಮೆಂಟ್ಗಳಲ್ಲಿ ಒಂದನ್ನೂ ಗೆಲ್ಲಲಾಗದಿರುವುದು ಶೋಚನೀಯ. ಈ ಬಗ್ಗೆ ಗಂಭೀರವಾಗಿ ಯೋಚಿಸಲೇಬೇಕಾಗಿದೆ ಎಂದು ಅಧ್ಯಕ್ಷರಾಗುವ ಮೊದಲೇ ಕೊಹ್ಲಿಗೆ ದಾದಾ ವಾರ್ನಿಂಗ್ ನೀಡಿದ್ದಾರೆ.
ಭಾರತ ತಂಡ 2013 ರಲ್ಲಿ ಇಂಗ್ಲೆಂಡ್ನಲ್ಲಿ ನಡೆದಿದ್ದ ಚಾಂಪಿಯನ್ ಟ್ರೋಫಿ ಗೆದ್ದ ನಂತರ ನಡೆದ 3 ಟಿ20 ವಿಶ್ವಕಪ್ ಹಾಗೂ ಎರಡು 50 ಓವರ್ಗಳ ವಿಶ್ವಕಪ್ ಹಾಗೂ ಒಂದು ಚಾಂಪಿಯನ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ಸೆಮಿಫೈನಲ್ ಹಾಗೂ ಫೈನಲ್ನಲ್ಲಿ ಸೋಲನುಭವಿಸಿ ನಿರಾಶೆ ಅನುಭವಿಸಿದೆ.
2013 ರಲ್ಲಿ ಎಂ ಎಸ್ ಧೋನಿ ನೇತೃತ್ವದ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಟ್ರೋಫಿ ಎತ್ತಿ ಹಿಡಿದಿತ್ತು. ಇದೇ ಭಾರತ ತಂಡಕ್ಕೆ ಕೊನೆಯ ಐಸಿಸಿ ಪ್ರಶಸ್ತಿಯಾಗಿ ಉಳಿದುಕೊಂಡಿದೆ.