ನವದೆಹಲಿ: ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ನಡೆದ ಭಾರತ-ಚೀನಾ ಯೋಧರ ಮುಖಾಮುಖಿಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಅವರ ಬಲಿದಾನಕ್ಕೆ ಇದೀಗ ಕ್ರಿಕೆಟರ್ಸ್ ಸೆಲ್ಯೂಟ್ ಹೇಳಿದ್ದು, ಅವರ ತ್ಯಾಗ, ಬಲಿದಾನಕ್ಕೆ ಇಡೀ ದೇಶವೇ ತಲೆಬಾಗುತ್ತದೆ ಎಂದಿದ್ದಾರೆ.
ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಆರಂಭಿಕ ಆಟಗಾರ ರೋಹಿತ್ ಶರ್ಮಾ ಸೇರಿದಂತೆ ಅನೇಕರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದು, ವೀರ ಯೋಧರ ಕುಟುಂಬಗಳಿಗೆ ಧೈರ್ಯ ತುಂಬಿದ್ದಾರೆ.
ದೇಶದ ರಕ್ಷಣೇ ವೇಳೆ ಗಾಲ್ವನ್ ಕಣಿವೆಯಲ್ಲಿ ಪ್ರಾಣ ತ್ಯಾಗ ಮಾಡಿರುವ ನಮ್ಮ ದೇಶದ ಸೈನಿಕರಿಗೆ ನನ್ನದೊಂದು ಸೆಲ್ಯೂಟ್. ಸೈನಿಕರಿಗಿಂತ ಯಾರು ನಿಸ್ವಾರ್ಥ ಹಾಗೂ ಧೈರ್ಯಶಾಲಿಗಳಾಗಿರಲು ಸಾಧ್ಯವಿಲ್ಲ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ದೇವರು ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.
ನಮ್ಮ ಗಡಿ ರಕ್ಷಣೆ ವೇಳೆ ಪ್ರಾಣ ತ್ಯಜಿಸಿರುವ ರಿಯಲ್ ಹೀರೋಗಳಿಗೆ ಸೆಲ್ಯೂಟ್. ದೇವರು ಅವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ರೋಹಿತ್ ಟ್ವೀಟ್ ಮಾಡಿದ್ದಾರೆ. ಸೋಮವಾರ ರಾತ್ರಿ ಪೂರ್ವ ಲಡಾಕ್ನ ಗಡಿಯಲ್ಲಿ ನಡೆದ ಸಂಘರ್ಷದ ವೇಳೆ ಭಾರತೀಯ ಸೇನೆಯ 20 ಯೋಧರು ಹುತಾತ್ಮರಾಗಿದ್ದರು. ಚೀನಾ ದೇಶದ 43 ಯೋಧರು ಘಟನೆಯಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿ ಹೊರಬಿದಿದೆ.
ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಇರ್ಫಾನ್ ಪಠಾಣ್ ಕೂಡ ಟ್ವೀಟ್ ಮಾಡಿದ್ದು, ವೀರ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.