ಅಹ್ಮದಾಬಾದ್: ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಿನ್ನೆಯ ಮೊದಲ ಟಿ20 ಪಂದ್ಯ ಸೇರಿದಂತೆ ಕಳೆದ 5 ಇನ್ನಿಂಗ್ಸ್ಗಳಲ್ಲಿ 3 ಬಾರಿ ಡಕ್ ಔಟ್ ಆಗಿದ್ದಾರೆ. ರನ್ ಮಷಿನ್ ಎಂದೇ ಕರೆಸಿಕೊಳ್ಳುತ್ತಿದ್ದ ಕೊಹ್ಲಿಯ ಈ ವೈಫಲ್ಯ ಭಾರತ ತಂಡಕ್ಕೆ ನುಂಗಲಾರದ ತುತ್ತಾಗಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ನಲ್ಲಿ ತಡಬಡಾಯಿಸಿದರು. 5 ಎಸೆತಗಳಲ್ಲಿ ಖಾತೆ ತೆರೆಯದೇ ಆದಿಲ್ ರಶೀದ್ ಬೌಲಿಂಗ್ನಲ್ಲಿ ಕ್ರಿಸ್ ಜೋರ್ಡಾನ್ಗೆ ಕ್ಯಾಚ್ ನೀಡಿ ಔಟಾದರು.
ಕೊಹ್ಲಿ ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲೂ ಡಕ್ ಔಟ್ ಆಗಿದ್ದರು. ಆಲ್ರೌಂಡರ್ ಬೆನ್ ಸ್ಟೋಕ್ಸ್ಗೆ ವಿಕೆಟ್ ಒಪ್ಪಿಸಿದ್ದರು. 2ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲೂ ಮೊಯೀನ್ ಅಲಿಗೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಅವರು 2ನೇ ಟೆಸ್ಟ್ನ 2ನೇ ಇನ್ನಿಂಗ್ಸ್ನಲ್ಲಿ 62 ಹಾಗೂ ಪಿಂಕ್ ಬಾಲ್ ಟೆಸ್ಟ್ನಲ್ಲಿ ಕೇವಲ 27 ರನ್ಗಳಿಸಿದ್ದರು.
5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 2ರನ್ಗೆ 1 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟಿಂಗ್ ಬಂದ ಕೊಹ್ಲಿ 5 ಎಸೆತಗಳನ್ನೆದುರಿಸಿ ಖಾತೆ ತೆರೆಯದೇ ವಿಕೆಟ್ ಒಪ್ಪಿಸಿದ್ದರಿಂದ ಭಾರತ ತಂಡ ಸಂಕಷ್ಟಕ್ಕೀಡಾಯಿತು.