ಚೆನ್ನೈ:ಫೆ. 5ರಿಂದ ಭಾರತ-ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭಗೊಳ್ಳಲಿದ್ದು, ಅದಕ್ಕಾಗಿ ಉಭಯ ತಂಡಗಳು ಈಗಾಗಲೇ ಚೆನ್ನೈಗೆ ಬಂದಿಳಿವೆ.
ಟೆಸ್ಟ್ ಪಂದ್ಯ ಆರಂಭಗೊಳ್ಳುವುದಕ್ಕೂ ಮೊದಲು ಉಭಯ ತಂಡದ ಆಟಗಾರರು ಮೂರು ದಿನಗಳ ಕ್ವಾರಂಟೈನ್ಗೊಳಗಾಗಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೋಟೆಲ್ ರೂಂನಲ್ಲಿ ವರ್ಕೌಟ್ ಮಾಡ್ತಿದ್ದಾರೆ. ಅದರ ವಿಡಿಯೋ ತುಣುಕುವೊಂದನ್ನ ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ.
ಇದೇ ತಿಂಗಳು ಮುಕ್ತಾಯಗೊಂಡಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ. ಈ ಸರಣಿಯಲ್ಲಿ ವಿರಾಟ್ ಮೊದಲ ಪಂದ್ಯದಲ್ಲಿ ಮಾತ್ರ ಭಾಗಿಯಾಗಿದ್ದರು. ಉಳಿದ ಪಂದ್ಯಗಳಲ್ಲಿ ರಹಾನೆ ತಂಡವನ್ನು ಮುನ್ನಡೆಸಿದ್ದರು. 2012ರಿಂದಲೂ ಟೀಂ ಇಂಡಿಯಾ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋತಿಲ್ಲ. ಹೀಗಾಗಿ ಈ ಸರಣಿ ಕೂಡ ಮಹತ್ವ ಪಡೆದುಕೊಂಡಿದೆ.
ಜನವರಿ 11ರಂದು ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಒಂದು ತಿಂಗಳಿನಿಂದ ಪತ್ನಿಯ ಜೊತೆಯಲ್ಲಿದ್ದ ಕೊಹ್ಲಿ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳುತ್ತಿದ್ದು, ಇಂಗ್ಲೆಂಡ್ ವಿರುದ್ಧ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾಯಕತ್ವದ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಫೆಬ್ರವರಿ 5ರಂದು ಎಂ.ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಇದೇ ಮೈದಾನದಲ್ಲಿ ಫೆಬ್ರವರಿ 13ರಿಂದ 17ರವರೆಗೆ 2ನೇ ಟೆಸ್ಟ್ ನಡೆಯಲಿದೆ. ಕೊನೆಯ ಎರಡು ಟೆಸ್ಟ್ಗಳು ನೂತನ ಮೊಟೆರಾ ಸ್ಟೇಡಿಯಂನಲ್ಲಿ ನಡೆಯಲಿವೆ.