ಆ್ಯಂಟಿಗುವಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದಿನಿಂದ ಮೊದಲ ಟೆಸ್ಟ್ ಆರಂಭವಾಗಲಿದೆ. ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಹಾಗೂ ಕೆ.ಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಮೊದಲ ಪಂದ್ಯದಲ್ಲಿ ಭಾರತ ಮೊದಲಿಗೆ ವಿಂಡೀಸ್ ಸವಾಲು ಎದುರಿಸಲಿದೆ. ಭಾರತ ತಂಡದ ಆರಂಭಿಕರಾದ ಪೃಥ್ವಿ ಷಾ ಹಾಗೂ ಶಿಖರ್ ಧವನ್ ತಂಡದಲ್ಲಿಲ್ಲವಾದ್ದರಿಂದ ಮಯಾಂಕ್ ಹಾಗೂ ರಾಹುಲ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಈ ಬಗ್ಗೆ ಕ್ಯಾಪ್ಟನ್ ಕೊಹ್ಲಿ ಪಂದ್ಯಕ್ಕೂ ಮುನ್ನ ಹೇಳಿಕೆ ನೀಡಿದ್ದಾರೆ.
ಶಿಖರ್,ವಿಜಯ್ ಹಾಗೂ ಪೃಥ್ವಿ ಶಾ ಸ್ಥಾನವನ್ನು ರಾಹುಲ್ ಹಾಗೂ ಮಯಾಂಕ್ ತುಂಬಲಿದ್ದು ಉತ್ತಮ ರನ್ಗಳಿಸುವ ಮೂಲಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ ಎಂದು ಕೊಹ್ಲಿ ಕಿವಿ ಮಾತು ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಆರಂಭಿಕನಾಗಿ ಪದಾರ್ಪಣೆ ಮಾಡಿದ್ದ ಮಯಾಂಕ್. ಸ್ಟಾರ್ಕ್, ಹೆಜಲ್ವುಡ್, ಕಮ್ಮಿನ್ಸ್ ಹಾಗೂ ನಥನ್ ಲಿಯಾನ್ ರಂತಹ ಅನುಭವಿ ಬೌಲರ್ಗಳ ವಿರುದ್ಧ ಅದ್ಭುತ ಬ್ಯಾಟಿಂಗ್ ಮಾಡಿದ್ದರು. ಪಂದ್ಯದ ಎರಡು ಇನ್ನಿಂಗ್ಸ್ನಲ್ಲಿ ಅರ್ಧಶತಕ ಸಿಡಿಸುವ ಮೂಲಕ ಅವರು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.