ನವದೆಹಲಿ: ಭಾರತ ಕಂಡ ಯಶಸ್ವಿ ನಾಯಕರಲ್ಲಿ ವಿರಾಟ್ ಕೊಹ್ಲಿ ಒಬ್ಬರು. ಎಲ್ಲಾ ವಿಭಾಗದ ಕ್ರಿಕೆಟ್ನಲ್ಲೂ ಅದ್ಭುತ ಬ್ಯಾಟಿಂಗ್ ದಾಖಲೆ ಬರೆಯುತ್ತಿರುವ ಕೊಹ್ಲಿ ಕಳೆದ ಎರಡು ಮೂರು ವರ್ಷಗಳಿಂದ ಭಾರತ ತಂಡದ ನೇತೃತ್ವವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.
ವಿರಾಟ್ ಕೊಹ್ಲಿ ಎಂದೊಡನೆ ಕೋಟ್ಯಂತರ ಅಭಿಮಾನಿಗಳ ಮುಂದೆ ಬರುವುದು ಅವರ ಕೋಪದ ಮನೋಭಾವನೆ. ಆದರೆ ಮೈದಾನದಲ್ಲಿ ಅಗ್ರೆಸ್ಸಿವ್ ಆಗಿ ಕಾಣುವ ಅವರ ಆ ಮನೋಭಾವನೆಯೇ ಅವರ ಯಶಸ್ಸಿನ ಗುಟ್ಟಾಗಿದೆ. ಆದರೆ ಅದಕ್ಕೂ ಮಿಗಿಲಾಗಿ ಕ್ರಿಕೆಟ್ ಆಟವೇ ಅವರ ಜೀವನ. ಅದಕ್ಕೆ ಮೊದಲ ಆದ್ಯತೆ ಎಂದುಕೊಂಡಿರುವ ಕೊಹ್ಲಿ ಜೀವನದಲ್ಲಿ ಅತ್ಯಂತ ಹೆಚ್ಚು ಪ್ರಭಾವ ಬೀರಿದ ಘಟನೆಯನ್ನು ಅವರೇ ಗ್ರಹಾಂ ಬೆನ್ಸಿಂಗರ್ ನಡೆಸಿಕೊಡುವ 'ಇನ್ ಡೆಪ್ತ್' ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಭಾರತ ತಂಡವನ್ನು ಪ್ರತಿನಿಧಿಸುವುದನ್ನು ನೋಡಬೇಕೆಂಬುದು ಕೊಹ್ಲಿ ತಂದೆಯ ಕೊನೆಯ ಆಸೆಯಾಗಿತ್ತು. ಮಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವ ಮೊದಲೇ 2006 ಡಿಸೆಂಬರ್ 16ರಂದು ಪ್ರೇಮ್ ಕೊಹ್ಲಿ ನಿಧನರಾಗಿದ್ದರು. ಆ ಸಮಯದಲ್ಲಿ ವಿರಾಟ್ ಕರ್ನಾಟಕ ವಿರುದ್ಧ ರಣಜಿ ಪಂದ್ಯವಾಡುತ್ತಿದ್ದರು. ಎರಡನೇ ದಿನ ಅಜೇಯ 40 ರನ್ ಗಳಿಸಿದ್ದ ಅವರು ಮೂರನೇ ದಿನ ತಂಡವನ್ನು ಫಾಲೋ ಆನ್ನಿಂದ ಪಾರು ಮಾಡುವ ಆಲೋಚನೆಯಲ್ಲಿದ್ದರು. ಆದರೆ ಅವರಿಗೆ ತಂದೆ ಸಾವಿನ ಸುದ್ದಿ ಆಕಾಶ ಕಳಚಿ ಬೀಳುವಂತೆ ಮಾಡಿತ್ತು. ತಮ್ಮನ್ನು ದೊಡ್ಡ ಕ್ರಿಕೆಟರ್ ಆಗಬೇಕೆಂಬ ಕನಸು ಕಂಡಿದ್ದ ತಂದೆಯ ಕೊನೆಯ ಆಸೆಯನ್ನು ಮನದಲ್ಲಿಟ್ಟುಕೊಂಡಿದ್ದ ಕೊಹ್ಲಿ ಮೈದಾನಕ್ಕಿಳಿದು 280 ನಿಮಿಷಗಳ ಕಾಲ ಬ್ಯಾಟಿಂಗ್ ನಡೆಸಿ ತಂಡವನ್ನು ಫಾಲೋ ಆನ್ನಿಂದ ಪಾರು ಮಾಡಿದ್ದರು. ದುಃಖದ ಸಂದರ್ಭದಲ್ಲಿಯೂ ದೆಹಲಿ ರಣಜಿ ತಂಡಕ್ಕಾಗಿ ದಿನಪೂರ್ತಿ ಬ್ಯಾಟಿಂಗ್ ನಡೆಸಿ ನಂತರ ತನ್ನ ತಂದೆಯ ಅಂತ್ಯ ಸಂಸ್ಕಾರಕ್ಕೆ ತೆರಳಿದಿದ್ದರು.
ಈ ಘಟನೆಯೇ ಅವರ ವೃತ್ತಿ ಬದುಕಿನಲ್ಲಿ ಅತ್ಯಂತ ಪ್ರಭಾವ ಬೀರಿದ ಘಟನೆ ಎಂದು ಕೊಹ್ಲಿ ತಿಳಿಸಿದ್ದಾರೆ. ತನ್ನ ತಂದೆಯ ಕನಸನ್ನು ತಮ್ಮ ಕನಸೆಂದೇ ನಿರ್ಧರಿಸಿದ ಅವರು, ಕ್ರಿಕೆಟ್ಗೆ ತಮ್ಮ ಜೀವನದಲ್ಲಿ ಮೊದಲ ಆದ್ಯತೆ ನೀಡಲು ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.
ಕ್ರೀಡೆಯಲ್ಲಿ ಏಳು-ಬೀಳು ಮಾಮೂಲು ಎನ್ನುವ ಕೊಹ್ಲಿ, ಬಿದ್ದ ಮೇಲೆ ಧೃತಿಗೆಡದೆ ಕಠಿಣ ಹೋರಾಟ ನಡೆಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ವಿರಾಟ್ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಬ್ಬ ಬ್ಯಾಟ್ಸ್ಮನ್ ಆಗಿ, ವಿಶ್ವಕ್ರಿಕೆಟ್ನ ಯಶಸ್ವಿ ಬ್ಯಾಟ್ಸ್ಮನ್ ಎಂಬುದನ್ನು ನಿರೂಪಿಸಿದ್ದಾರೆ. ಇದೀಗ ನಾಯಕತ್ವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, ಮುಂದೊಂದು ದಿನ ಯಶಸ್ವಿ ನಾಯಕ ಎಂಬ ಹೆಸರನ್ನು ಖಂಡಿತಾ ಸಂಪಾದಿಸಲಿದ್ದಾರೆ.