ಮುಂಬೈ :2014ರ ಇಂಗ್ಲೆಂಡ್ ಪ್ರವಾಸದಲ್ಲಿನ ವೈಫಲ್ಯದ ನಂತರ ಸಚಿನ್ ತೆಂಡೂಲ್ಕರ್ ನೀಡಿದ ಕೆಲ ಬ್ಯಾಟಿಂಗ್ ತಂತ್ರಗಾರಿಕೆ ಸಲಹೆಗಳು ನನ್ನನ್ನು ಉತ್ತಮ ಟೆಸ್ಟ್ ಬ್ಯಾಟ್ಸ್ಮನ್ ಆಗಿ ಮಾಡಿತು ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
2014ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ವೇಳೆ ವಿರಾಟ್ ಕೊಹ್ಲಿ 10 ಇನ್ನಿಂಗ್ಸ್ನಲ್ಲಿ ಕೇವಲ 134 ರನ್ಗಳಿಸಿದ್ದರು. ಇಡೀ ಟೂರ್ನಿಯಲ್ಲಿ ಅವರು ಗಳಿಸಿದ್ದ ಗರಿಷ್ಠ ಸ್ಕೋರ್ ಎಂದರೆ ಅದು 38 ರನ್. ಟೆಸ್ಟ್ ಕ್ರಿಕೆಟ್ ಜೀವನವೇ ಮುಗಿಯಿತು ಎಂದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ನೀಡಿದ ಸಲಹೆಗಳು ಕೊಹ್ಲಿಯನ್ನು ಯಶಸ್ವಿ ಬ್ಯಾಟ್ಸ್ಮನ್ ಆಗಿ ಮಾಡಿತು ಎಂದು ಅವರು ಸಹ ಆಟಗಾರ ಮಯಾಂಕ್ ಅಗರ್ವಾಲ್ ಜೊತೆ ನಡೆಸಿದ ಸಂದರ್ಶನ ವೇಳೆ ಹೇಳಿಕೊಂಡಿದ್ದಾರೆ.
ಇಂಗ್ಲೆಂಡ್ ಪ್ರವಾಸದ ವೇಳೆ ನನ್ನ ಸೊಂಟದ ಸಮಸ್ಯೆ ಎದುರಾಗಿತ್ತು. ನಿಮ್ಮ ಬಲ ಭಾಗದ ಸೊಂಟ ಹೆಚ್ಚು ತೆರೆದರೆ ಅಥವಾ ಹೆಚ್ಚು ಮುಚ್ಚಿದರೆ ನೀವು ತೊಂದರೆಯಲ್ಲದ್ದೀರಿ ಎಂದರ್ಥ. ನೀವು ಬ್ಯಾಟಿಂಗ್ ಮಾಡುವಾಗ ಸೊಂಟದ ಸ್ಥಾನ ಸಮತೋಲನವಾಗಿರಿಸಿಕೊಂಡರೆ ಆಪ್ಸೈಡ್ ಮತ್ತು ಲೆಗ್ ಸೈಡ್ ಎರಡನ್ನು ನಿಯಂತ್ರಣ ಸಾಧಿಸಿ ಆಡಬಹುದು ಎಂದು ಮಯಾಂಕ್ ಜೊತೆ ತಾವು ಎದುರಿಸಿದ ಸಮಸ್ಯೆ ಹೇಳಿಕೊಂಡಿದ್ದಾರೆ.
ಇಂಗ್ಲೆಂಡ್ನಿಂದ ವಾಪಾಸ್ಸಾದ ಬಳಿಕ ನಾನು ಸಚಿನ್ ತೆಂಡೂಲ್ಕರ್ರನ್ನು ಭೇಟಿ ಮಾಡಿ ನಾನು ಎದುರಿಸಿದ ಸಮಸ್ಯೆ ಹೇಳಿಕೊಂಡೆ. ಈ ಸಂದರ್ಭದಲ್ಲಿ ವೇಗದ ಬೌಲರ್ಗಳ ವಿರುದ್ಧ ಹೇಗೆ ಆಡಬೇಕೆಂಬ ಹಲವು ವಿಚಾರಗಳನ್ನು ನನಗೆ ಮನವರಿಕೆ ಮಾಡಿಕೊಟ್ಟರು. ನಂತರ ನಾನು ನನ್ನ ಸೊಂಟ ಜೋಡಣೆಯೊಂದಿಗೆ ಅವರ ಸಲಹೆಯನ್ನು ಅನುಸರಿಸಿದೆ. ನಂತರ ನನ್ನ ಆಟದಲ್ಲಿ ಸಾಕಷ್ಟು ಬದಲಾಯಿತು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಯಶಸ್ವಿಯಾದೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಇಂಗ್ಲೆಂಡ್ ಟೂರ್ನಲ್ಲಿ ವಿಫಲರಾದರು ಅದೇ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ಅದ್ಭುತ ಪ್ರದರ್ಶನ ತೋರಿದ್ದರು. ಆ ಸರಣಿಯಲ್ಲಿ 4 ಶತಕಗಳ ಸಹಿತ 86.50 ಸರಾಸರಿಯಲ್ಲಿ 692 ರನ್ಗಳಿಸಿದರು.