ದುಬೈ :2016ರಲ್ಲಿದ್ದಷ್ಟೇ ಪ್ರಸ್ತುತರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯಂತ ಬಲಿಷ್ಠಅಂತಾ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
13ನೇ ಆವೃತ್ತಿಯ ಐಪಿಎಲ್ ಸೆಪ್ಟೆಂಬರ್ 19ರಂದು ಆರಂಭವಾಗಲಿದೆ. 3 ಬಾರಿ ಫೈನಲ್ ತಲುಪಿದ್ರೂ ಒಮ್ಮೆಯೂ ಟ್ರೋಫಿ ಗೆಲ್ಲದ ಆರ್ಸಿಬಿ ತಂಡ ಈಗಾಗಲೇ ಭರ್ಜರಿ ತಾಲೀಮು ನಡೆಸಿದೆ. ಕಳೆದ ಆವೃತ್ತಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಆರ್ಸಿಬಿ 2020ರ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವ ಅವಕಾಶ ಹೊಂದಿದೆ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
2016ರಲ್ಲಿ ಬೆಂಗಳೂರು ಮೂಲದ ಆರ್ಸಿಬಿ 3ನೇ ಬಾರಿಗೆ ಫೈನಲ್ ಪ್ರವೇಶಿಸಿತ್ತು. ನಂತರ 2017 ಮತ್ತು 2019ರಲ್ಲಿ ಕೊನೆಯ ಸ್ಥಾನ ಹಾಗೂ 2018ರಲ್ಲಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ತಂಡದಲ್ಲಿ ಡೆತ್ ಬೌಲಿಂಗ್ ಉತ್ತಮವಾಗಿರದಿರುವುದು ಹಾಗೂ ಬ್ಯಾಟಿಂಗ್ನಲ್ಲಿ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ರನ್ನು ಹೆಚ್ಚು ಅವಲಂಬಿತವಾಗಿರುವುದು ತಂಡದ ಹಿನ್ನಡೆಗೆ ಕಾರಣವಾಗಿತ್ತು.
ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ರಿಸ್ ಮೊರೀಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಅಲ್ಲದೆ ಆ್ಯರೋನ್ ಫಿಂಚ್, ಜೋಶ್ ಫಿಲಿಪ್ಪೆ ಅವರು ಕೂಡ ಆರ್ಸಿಬಿ ಭಾಗವಾಗಿರುವುದರಿಂದ ತಂಡ ಸಮತೋಲನದಿಂದ ಕೂಡಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಆರ್ಸಿಬಿ ತಂಡ ಎಲ್ಲಾ ವಿಭಾಗದಲ್ಲೂ ಉತ್ತಮವಾಗಿದೆ ಎಂದು ನಾನು ಒಪ್ಪುತ್ತೇನೆ. ಅದಕ್ಕೇ ಸೂಕ್ತ ಕಾರಣವೆಂದರೆ ತಂಡದಲ್ಲಿ ಕ್ರಿಸ್ ಮೊರೀಸ್ ಸೇರ್ಪಡೆಗೊಂಡಿದ್ದಾರೆ. ಅವರು ತಂಡಕ್ಕೆ ಸಾಕಷ್ಟು ಅನುಭವ ತಂದಿದ್ದಾರೆ. ಈ ವರ್ಷ ಆಯ್ಕೆ ಮಾಡಿಕೊಂಡಿರುವ ಯುವ ಆಟಗಾರರು ತುಂಬಾ ಉತ್ಸಾಹದಲ್ಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಾಕಷ್ಟು ಅನುಭವವುಳ್ಳ ಆ್ಯರೋನ್ ಫಿಂಚ್, ಭವಿಷ್ಯದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿರುವ ಆಸೀಸ್ನ ಜೋಶ್ ಫಿಲಿಪ್ಪೆ ಕೂಡ ತಂಡದ ಬಲ ಹೆಚ್ಚಿಸಲಿದ್ದಾರೆ.
ನಾವು ಅತ್ಯುತ್ತಮ, ಸಮತೋಲಿತ ತಂಡ ಹೊಂದಿದ್ದೇವೆ ಎಂದು ಭಾವಿಸುತ್ತೇನೆ. ಅವಕಾಶ ಹಾಗೂ ಜವಾಬ್ದಾರಿ ಪಡೆಯುವುದಕ್ಕಾಗಿ ಕೆಲ ಯುವ ಆಟಗಾರರು ತುದಿಗಾಲಲ್ಲಿ ನಿಂತಿದ್ದಾರೆ. ಹಲವಾರು ಅನುಭವಿಗಳಿದ್ದಾರೆ. ಪ್ರಾಮಾಣಿಕವಾಗಿ 2016ರ ನಂತರ ಇದು ಉತ್ತಮ ತಂಡವಾಗಿದೆ. ನಾವು ಟೂರ್ನಿಗಾಗಿ ಸಾಕಷ್ಟು ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಮೈದಾನದಲ್ಲಿ ಕಾರ್ಯಗತಗೊಳಿಸುವುದಕ್ಕೆ ಕಾಯುತ್ತಿದ್ದೇವೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.